ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸನಿತಿ ಜಿಲ್ಲಾ ಘಟಕ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜು. 27ರಂದು(ನಾಳೆ) ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಲಿದೆ.
ಪ್ಲಾಸ್ಟಿಕ್ ನಿಷೇಧದ ಹೆಸರಿನಲ್ಲಿ ಮತ್ತು ಹೆಚ್ಚಿದ ವಿದ್ಯುತ್ ದರದ ಹಿನ್ನೆಲೆಯಲ್ಲಿ ಮೂರು ತಿಂಗಳ ಬಿಲ್ ಮೊತ್ತದ ಸರಾಸರಿಯನ್ವಯ ಹೆಚ್ಚುವರಿ ಠೇವಣಿ ಪಾವತಿಸಲು ಸೂಚನೆ ನೀಡಿರುವುದು, ಅಗತ್ಯ ವಸ್ತುಗಳಿಗೆ ಶೇ. 5 ಜಿಎಸ್‍ಟಿ ಹೇರಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿರುವ ಸರ್ಕಾರದ ನೀತಿ ವಿರೋಧಿಸಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಿಂದ ಬೀದಿಪಾಲಾದ ವರ್ತಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೋಲು ಮಿಠಾಯಿಯಲ್ಲಿನ ಕೋಲು ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟಿರುವುದಾಗಿ ಅಧಿಕಾರಿಗಳು ಇದರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಅಂಗಡಿ ಮಾಲಿಕರನ್ನು ಬೇಟೆಯಾಡುತ್ತಿರುವುದು ಹಾಗೂ ದಂಡ ವಸೂಲಿ ನಡೆಸುತ್ತಿರುವ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಈ ಕ್ರಮ ನಿಲ್ಲಿಸುವಂತೆಯೂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಧರಣಿಯ ಪೂರ್ವಭಾವಿಯಾಗಿ ಪ್ರತಿಭಟನಾ ಮೆರವಣಿಗೆ ಮತ್ತು ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಧರಣಿ ಸತ್ಯಾಗ್ರಹ ನಡೆಯಲಿರುವುದಾಗಿ ಜಿಲ್ಲಾಧ್ಯಕ್ಷ ಕೆ.ಅಹ್ಮದ್ ಶರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿನ್ ಕೋಳಿಕಾರ, ಎ.ಎ.ಅಜೀಜ್, ಟಿ.ಎ.ಇಲ್ಯಾಸ್, ಕೆ.ದಿನೇಶ್ ಭಾಗವಹಿಸಿದ್ದರು.
ನಾಳೆ ವ್ಯಾಪಾರಿಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
0
ಜುಲೈ 26, 2022