ಕುಂಬಳೆ: ಗ್ರಾಮೋತ್ಸವಗಳು ಗ್ರಾಮೀಣ ಜನತೆಯ ಕೃಷಿಬದುಕಿನ ದ್ಯೋತಕವಾಗಿದ್ದು, ಇದು ಕೃಷಿಬದುಕಿಗೆ ಪೂರಕವಾಗಿರುವುದಾಗಿದೆ ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದರು.
ಅವರು ಭಾನುವಾರ ಪುತ್ತಿಗೆ ಎಸ್.ಕೆ.ಎಸ್ ಕಲಾ ಮತ್ತು ಕ್ರೀಡಾ ಕ್ಲಬ್ಬಿನ 50ನೇ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ಪುತ್ತಿಗೆ ಸಂತೆಗದ್ದೆಯಲ್ಲಿ ನಡೆದ ಗ್ರಾಮೋತ್ಸವ ಮತ್ತು ವರ್ಷಪೂರ್ತಿ ನಡೆಯಲಿರುವ 50 ಸಮಾಜಮುಖಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಂಜೇಶ್ವರ ಶಾಸಕ ಎ.ಕೆ ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಗಳು ನಡೆಸುವ ಸಮಾಜಮುಖಿ ಚಟುವಟಿಕೆ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹದಾಯಕವಾಗಿದೆ. ಪುತ್ತಿಗೆ ಎಸ್‍ಕೆಎಸ್ ಸಂಘಟನೆಯ ಜನಪರ ಕಾರ್ಯಗಳಿಗೆ ಶಾಸಕ ನಿಧಿಯಿಂದ ಮೊತ್ತ ಮಂಜೂರುಗೊಳಿಸಲು ಬದ್ಧ ಎಂದು ತಿಳಿಸಿದರು.
ಈ ಸಂದರ್ಭ ಕೇರಳ ರಾಜ್ಯ ಪ್ರಶಸ್ತಿ ವಿಜೇತ ಅತ್ಯುತ್ತಮ ಕೃಷಿಕ ಶಿವಾನಂದ ಬಳಕ್ಕಿಲ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಕಾಸರಗೋಡು ಜಿಪಂ ಸದಸ್ಯೆ ನಾರಾಯಣ ನಾಯ್ಕ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಚಂದ್ರಾವತಿ ಕೆಮ್ಮಣ್ಣು, ಪುತ್ತಿಗೆ ಗ್ರಾಪಂ ಸದಸ್ಯ ಕೇಶವ ಉಪಸ್ಥಿತರಿದ್ದರು. ಸುವರ್ಣಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಿ. ದಾಮೋದರ ಸ್ವಾಗತಿಸಿದರು. ಸಂಘಟನೆ ಪ್ರಧಾನ ಕಾರ್ಯದರ್ಶಿ ಗಿರೀಶ್ ಇ. ವಂದಿಸಿದರು.
ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಕೆಸರಿನಲ್ಲಿ ಕಬಡ್ಡಿ, ವಾಲಿಬಾಲ್, ಗೋಣಿಚೀಲ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ನಡೆಯಿತು. ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.