ನಾಗರಿಕ ದಂಗೆ ಪರಿಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಅಧ್ಯಕ್ಷ ಗೋತಬಯ ರಾಜಪಕ್ಸ ಅಧಿಕಾರ ತ್ಯಜಿಸುವವರೆಗೂ ಅಧ್ಯಕ್ಷರ ನಿವಾಸ ತೆರವು ಮಾಡುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಭಾರತದ ಸಹಾನುಭೂತಿ
ಪೌರಾಣಿಕ, ಚಾರಿತ್ರಿಕವಾಗಿ ಸಂಬಂಧ ಹೊಂದಿರುವ ಲಂಕಾ ಬಗ್ಗೆ ಭಾರತ ಸಹಾನುಭೂತಿ ಹೊಂದಿದೆ. ತೈಲ ಖರೀದಿಸಲು ದುಡ್ಡಿಲ್ಲದ ದ್ವೀಪರಾಷ್ಟ್ರಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯನ್ನು ಉದಾರಿಯಾಗಿ ನೀಡಿದೆ. ಇದರ ಬಾಬ್ತು 3.80 ಶತಕೋಟಿ ಡಾಲರ್ (30 ಸಾವಿರ ಕೋಟಿ ರೂಪಾಯಿ). ಇಷ್ಟಲ್ಲದೆ ಟ್ರಿಂಕೋಮಲಿ ಬಂದರಿನಲ್ಲಿರುವ ಸುಮಾರು 100 ತೈಲಾಗಾರಗಳ ಪುನಶ್ಚೇತನಕ್ಕೂ ಭಾರತ ಸಹಾಯ ಮಾಡುತ್ತಿದೆ. ಜತೆಗೆ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಉಚಿತವಾಗಿ ಪೂರೈಕೆ ಮಾಡಿದೆ. ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಈವರೆಗೆ ದೊಡ್ಡ ಮಟ್ಟದಲ್ಲಿ ಕಾಣಿಸಿಲ್ಲ. ನಿರಾಶ್ರಿತರಾಗಿ ಬಂದವರಿಗೆ ನೂರಾರು ಮಂದಿಗೆ ತಮಿಳುನಾಡಿನ ಶಿಬಿರಗಳಲ್ಲಿ ತಾತ್ಕಾಲಿಕವಾಗಿ ವಸತಿ ಕಲ್ಪಿಸಲಾಗಿದೆ. 1960, 1983 ಮತ್ತು 2009ರಲ್ಲಿ ಲಕ್ಷಾಂತರ ಜನರು ಭಾರತಕ್ಕೆ ವಲಸೆ ಬಂದಿದ್ದರು.
ಲಂಕಾ ಪತನಕ್ಕೆ ಚೀನಾ ಕಾರಣ
ಒನ್ ಬೆಲ್ಟ್ ಇನಿಷಿಯೇಟಿವ್ ಯೋಜನೆಯಲ್ಲಿ ಶ್ರೀಲಂಕಾವನ್ನು ಸೇರಿಸಿಕೊಂಡಿರುವ ಚೀನಾ, ಉಪಕಾರ ಮಾಡುವ ನೆಪದಲ್ಲಿ ಲಂಕಾದ ಆರ್ಥಿಕತೆಯನ್ನು ನುಂಗಿನೊಣೆದಿದೆ. ಚೀನಾಕ್ಕೆ 8 ಬಿಲಿಯನ್ ಡಾಲರ್ (63 ಸಾವಿರ ಕೋಟಿ ರೂ. ಭಾರತದ ಕರೆನ್ಸಿ) ಸಾಲವನ್ನು ಲಂಕಾ ಮರುಪಾವತಿ ಮಾಡಬೇಕಿದೆ. ಲಂಕಾದ ಎರಡನೇ ಅತಿ ದೊಡ್ಡ ಬಂದರಾಗಿರುವ ಹಂಬಂತೋಟವನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಅದನ್ನು ಚೀನಾ ಗಿರವಿ ಇರಿಸಿಕೊಂಡಿದೆ. ಲಂಕಾ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸಾಲದಿಂದ ವಿನಾಯಿತಿ ನೀಡಲು ಒಪ್ಪದ ಚೀನಾ ಕಠೋರ ನೀತಿಯನ್ನು ಅನುಸರಿಸಿದೆ. ಸ್ವಾವಲಂಬಿಯಾಗಲು ಪ್ರಯತ್ನಿಸಿ ನೆರವು ನೀಡುತ್ತೇವೆ ಎಂದು 76 ಮಿಲಿಯನ್ ಡಾಲರ್ (600 ಕೋಟಿ ರೂ. ಭಾರತದ ಕರೆನ್ಸಿ) ಸಾಲವನ್ನು ದುರ್ದಾನ ಎನ್ನುವಂತೆ ನೀಡಿದೆ. ಇದು ಕಾಳಜಿಯಿಂದ ನೀಡಿದ್ದಲ್ಲ, ಜಾಗತಿಕ ಸಮುದಾಯದ ಮುಂದೆ ಮುಖಉಳಿಸಿಕೊಳ್ಳುವ ಪ್ರಯತ್ನವಷ್ಟೆ.
ಕುಸಿತಕ್ಕೆ ಪಂಚ ಕಾರಣ
- ಅಸಮರ್ಪಕ ಆರ್ಥಿಕ ನಿರ್ವಹಣೆ: ಆದಾಯಕ್ಕೂ ಮೀರಿ ಖರ್ಚುವೆಚ್ಚ ಮಾಡಿದ್ದು, ಸರಕುಗಳ ಉತ್ಪಾದನೆ ಮತ್ತು ಸೇವೆಯಲ್ಲಿ ಅಸಮತೋಲನ, 2019ರಲ್ಲಿ ರಾಜಪಕ್ಸ ನೇತೃತ್ವದ ಸರ್ಕಾರ ತೆರಿಗೆಯಲ್ಲಿ ಭಾರಿ ಇಳಿಕೆ ಮಾಡಿದ್ದು ಕೂಡ ದೇಶದ ಆರ್ಥಿಕತೆಯನ್ನು ಅಪಾಯದ ಮಡುವಿಗೆ ನೂಕಿತು. ಲಂಕಾದಲ್ಲಿ ಕಳೆದ ತಿಂಗಳು ಹಣದುಬ್ಬರ ದರ ಶೇ. 54.6ಕ್ಕೆ ಏರಿದೆ. ಆದರೆ, ಕೇಂದ್ರೀಯ ಬ್ಯಾಂಕ್ ಶೇ.70 ಎಂದಿದೆ.
- ರಸಗೊಬ್ಬರ ನಿಷೇಧ: ಪೂರ್ವ ತಯಾರಿ ಇಲ್ಲದೆ ರಸಗೊಬ್ಬರ ಆಮದನ್ನು ಲಂಕಾ ಸರ್ಕಾರ 2021ರ ಏಪ್ರಿಲ್ನಲ್ಲಿ ನಿಷೇಧಿಸಿತು. ತತ್ಪರಿಣಾಮ ಕೃಷಿ ಉತ್ಪಾದನೆಯಲ್ಲಿ ಹಠಾತ್ ಕುಸಿತವಾಗಿ ದೇಶದ ಆರ್ಥಿಕತೆಯ ಬುಡ ಅಲುಗಾಡಲು ಆರಂಭಿಸಿತು. ಆಹಾರ ಸಮಸ್ಯೆ ಕಾಡತೊಡಗಿತು. ಎರಡು ಎಕರೆ ಪ್ರದೇಶದಲ್ಲಿ 60 ಚೀಲ ಬೆಳೆಯುತ್ತಿದ್ದ ಭತ್ತ, 10 ಚೀಲಕ್ಕೆ ಇಳಿಯಿತು. ಅಕ್ಕಿ ಆಮದು ಶೇ. 30ರಷ್ಟು ಏರಿಕೆಯಾಗಿ ಬೆಲೆ ಹೆಚ್ಚಳವಾಯಿತು. ಸಿಂಹಳದಿಂದ ರಫ್ತಾಗುತ್ತಿದ್ದ ಟೀ, ಕರಿಮೆಣಸು ಸ್ಥಗಿತವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕಳೆದುಕೊಂಡಿತು.
- ಕರೊನಾ ಸಾಂಕ್ರಾಮಿಕದ ಪರಿಣಾಮ: ಕರೊನಾ ಜಾಡ್ಯದ ಕಾರಣ ದೇಶದಲ್ಲಿ ಚಟುವಟಿಕೆಗಳು ಸುಮಾರು 2 ವರ್ಷ ಸ್ಥಗಿತಗೊಂಡಿದ್ದವು. ವಿಶೇಷವಾಗಿ ಪ್ರಮುಖ ಆದಾಯ ಮೂಲವಾದ ಪ್ರವಾಸೋದ್ಯಮಕ್ಕೆ ಹೊಡೆತ ಬಿತ್ತು. ವಾರ್ಷಿಕವಾಗಿ ಸುಮಾರು 4.40 ಬಿಲಿಯನ್ ಡಾಲರ್ (ಸುಮಾರು 35 ಸಾವಿರ ಕೋಟಿ ರೂ. ಭಾರತದ ಕರೆನ್ಸಿ) ವರಮಾನ ಪ್ರವಾಸೋದ್ಯಮದಿಂದಲೇ ಬರುತಿತ್ತು. ಇದು ದೇಶದ ಒಟ್ಟಾರೆ ದೇಶೀಯ ಉತ್ಪನ್ನ ದರ (ಜಿಡಿಪಿ)ದಲ್ಲಿ ಶೇ. 5.6ರಷ್ಟಿತ್ತು. ಕರೊನಾ ವ್ಯಾಪಿಸಿದ ನಂತರ ಈ ಆದಾಯ ಮೂಲ ಭಾರಿ ಕುಸಿತ ಕಂಡು ಜಿಡಿಪಿಯಲ್ಲಿ ಶೇ. 0.8ಕ್ಕೆ ಇಳಿಯಿತು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾದರು. ತಿಂಗಳಿಗೆ ಸರಾಸರಿ 2.50 ಲಕ್ಷ ಪ್ರವಾಸಿಗರು ಇರುತ್ತಿದ್ದ ಶ್ರೀಲಂಕಾದಲ್ಲಿ ಕರೊನಾ ಸಮಯದಲ್ಲಿ ಇದು ಶೂನ್ಯದ ಮಟ್ಟಕ್ಕೆ ಕುಸಿಯಿತು. ಕರೊನಾ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ದೇಶದ ಆರ್ಥಿಕತೆ ಹದಗೆಟ್ಟು, ರಾಜಕೀಯ ವಿಪ್ಲವ ಶುರುವಾಯಿತು. ಇದರಿಂದ ಪ್ರವಾಸಿಗಳು ಲಂಕಾಕ್ಕೆ ಬರಲು ಅಂಜುತ್ತಿದ್ದಾರೆ.
- ಹೆಚ್ಚಿದ ಸಾಲದ ಹೊರೆ: ಕುಸಿಯುತ್ತಿದ್ದ ಆರ್ಥಿಕತೆಯನ್ನು ತಡೆಯಲು ಲಂಕಾ ಸರ್ಕಾರ ಗೊತ್ತುಗುರಿ ಇಲ್ಲದೆ ಸಾಲ ಮಾಡಿದೆ. ಇದು ನಗದು ಮತ್ತು ಸರಕಿನ ರೂಪದಲ್ಲಿದ್ದು, ಇದರ ಮೊತ್ತ 51 ಬಿಲಿಯನ್ ಡಾಲರ್ (4 ಲಕ್ಷ ಕೋಟಿ ರೂ. ಭಾರತದ ಕರೆನ್ಸಿ) ಮತ್ತು ಬಡ್ಡಿ. ಇದನ್ನು ತೀರಿಸಲು ಆಗದೆ ಕಳೆದ ಮೇ ಮಧ್ಯಭಾಗದಲ್ಲಿ ಸ್ವಯಂ ಪ್ರಧಾನಿ ರನಿಲ ವಿಕ್ರಮಸಿಂಘ ಅವರೇ ದೇಶ ದಿವಾಳಿ ಎದ್ದಿದೆ ಎಂದು ಘೋಷಿಸಿದ್ದಾರೆ. ಸಾಲದ ಶೂಲದಲ್ಲಿ ಸಿಲುಕಿದ ಶ್ರೀಲಂಕಾದ ಕ್ರೆಡಿಟ್ ರೇಟಿಂಗ್ 2020ರಿಂದ ಅಧೋಮುಖವಾಗಿಯೇ ಇದೆ. ಇದೇ ಕಾರಣಕ್ಕೆ ಶ್ರೀಲಂಕಾ ಸರ್ಕಾರ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) 3 ಶತಕೋಟಿ ಡಾಲರ್ (23,787 ಕೋಟಿ ರೂ. ಭಾರತದ ಕರೆನ್ಸಿ) ನೆರವಿಗೆ ಮನವಿ ಮಾಡಿದೆ. ಇದರ ಹೊರತಾಗಿ ಜಾಗತಿಕ ಸಮುದಾಯ ಕೂಡ ಅಷ್ಟಿಷ್ಟು ನೆರವನ್ನು ನೀಡಿವೆ.
- ವಿದೇಶಿ ಮೀಸಲು ಶೇ. 70ರಷ್ಟು ಕುಸಿತ: ಸರಕು ಆಮದಿಗೆ ಮುಖ್ಯವಾದ ವಿದೇಶಿ ಮೀಸಲು ಕಳೆದೆರಡು ವರ್ಷದಲ್ಲಿ ಶೇ. 70ರಷ್ಟು ಕರಗಿದೆ. ಇದರಿಂದ ಅತ್ಯಾವಶ್ಯಕ ವಸ್ತುಗಳನ್ನು ವಿಶೇಷವಾಗಿ ದೇಶದ ಚಲನಶೀಲತೆಗೆ ಅಗತ್ಯವಾದ ಇಂಧನ ಕೊಳ್ಳಲೂ ಲಂಕಾದಲ್ಲಿ ಕಾಸಿಲ್ಲದ ಪರಿಸ್ಥಿತಿ ಇದೆ. ಇದರಿಂದ ತೈಲ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ ಕಂಡಿದೆ. ಲಂಕಾ ಹಣಕಾಸು ಸಚಿವಾಲಯದ ಪ್ರಕಾರ, ವಿದೇಶಿ ಮೀಸಲಿನಲ್ಲಿ 25 ಮಿಲಿಯನ್ ಡಾಲರ್ (198 ಕೋಟಿ ರೂ. ಭಾರತದ ಕರೆನ್ಸಿ) ಮಾತ್ರ ಉಳಿದಿದೆ. ಡಾಲರ್ ಎದುರು ಶ್ರೀಲಂಕಾ ರೂಪಾಯಿ ಶೇ. 80ರಷ್ಟು ಪತನವಾಗಿದ್ದು, ಒಂದು ಡಾಲರ್ಗೆ 360 ರೂಪಾಯಿ ವಿನಿಮಯ ದರ ಇದೆ.
ಸರ್ಕಾರ ತಕ್ಷಣ ಏನು ಮಾಡಬೇಕು?: ಹಣವಿಲ್ಲದೆ ಪರದಾಡುತ್ತಿರುವ ಕಾರಣ ಶೀಘ್ರ ನೆರವು ನೀಡುವಂತೆ ಸಿಲೋನ್ ಸರ್ಕಾರ ಐಎಂಎಫ್ಗೆ ಮತ್ತೆ ಮನವಿ ಮಾಡಬೇಕಿದೆ. ಆದರೆ, ರಾಜಕೀಯ ಅಸ್ಥಿರತೆ ಇರುವ ಕಾರಣ ಈ ಪ್ರಯತ್ನ ಮುಂದಕ್ಕೆ ಹೋಗಲಿದೆ. ಏಷ್ಯಾ ಉಪಖಂಡದ ವಿಶೇಷವಾಗಿ ಭಾರತ, ಚೀನಾಗಳಿಂದ ಹೆಚ್ಚಿನ ನೆರವನ್ನು ಪಡೆಯಲು ಸರ್ಕಾರ ಪ್ರಯತ್ನಿಸಬೇಕಿದೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾಗಳು ಕೆಲವು ಲಕ್ಷ ಡಾಲರ್ಗಳ ನೆರವನ್ನು ಈಗಾಗಲೇ ನೀಡಿವೆ.
ಮುಂದೇನು?: ಪ್ರತಿಭಟನಾಕಾರರ ಬಿಗಿಪಟ್ಟಿಗೆ ಕಡೆಗೂ ಮಣಿದಿರುವ ಅಧ್ಯಕ್ಷ ಗೋತಬಯ ರಾಜಪಕ್ಸ ಬುಧವಾರ (ಜುಲೈ 13) ರಾಜೀನಾಮೆ ನೀಡುವುದಾಗಿ ಅಜ್ಞಾತ ಸ್ಥಳದಿಂದಲೇ ಹೇಳಿದ್ದಾರೆ. ಸರ್ವಪಕ್ಷಗಳ ಮಧ್ಯಂತರ ಸರ್ಕಾರಕ್ಕೆ ಸಮ್ಮತಿಸಲಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ರನಿಲ ವಿಕ್ರಮಸಿಂಘ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಮತ್ತು ಪ್ರಧಾನಿ ಅನುಪಸ್ಥಿತಿಯಲ್ಲಿ ಸಂಸತ್ನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು. ಸಂಸದರು ಶೀಘ್ರದಲ್ಲೇ ಸಭೆ ಸೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎನ್ನುತ್ತದೆ ಲಂಕಾ ಸಂವಿಧಾನ.
ಜನರ ಮೇಲಾಗುತ್ತಿರುವ ದುಷ್ಪರಿಣಾಮ: ಲಂಕಾದಲ್ಲಿನ ಬೆಲೆ ಏರಿಕೆ ಪರಿಣಾಮ ಜನರು ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಆಗುತ್ತಿಲ್ಲ. 10ರಲ್ಲಿ 9 ಕುಟುಂಬಗಳು ಒಪ್ಪೊತ್ತಿನ ಊಟ ಬಿಟ್ಟಿವೆ ಅಥವಾ ಕಡಿಮೆ ಮಾಡಿವೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮ ತಿಳಿಸಿದೆ. 30 ಲಕ್ಷ ಮಂದಿಗಷ್ಟೆ ತುರ್ತು ಮಾನವೀಯ ನೆರವು ಲಭ್ಯವಾಗುತ್ತಿದೆ. ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗಲು ಬಯಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ನೌಕರರಿಗೆ ಮೂರು ತಿಂಗಳವರೆಗೆ ಹೆಚ್ಚುವರಿ ರಜೆ ನೀಡಿ ಆಹಾರ ಬೆಳೆದುಕೊಳ್ಳುವಂತೆ ಸೂಚಿಸಲಾಗಿದೆ.
50 ಸಾವಿರ ಡಾಲರ್ ಪತ್ತೆ: ಅಧ್ಯಕ್ಷರ ಅರಮನೆಯಲ್ಲಿ ಗರಿಗರಿ ನೋಟುಗಳು ದೊರಕಿದ್ದು, ಇದರ ಮೊತ್ತ 50 ಸಾವಿರ ಡಾಲರ್ (ಸುಮಾರು 40 ಲಕ್ಷ ರೂಪಾಯಿ). ಈ ಹಣವನ್ನು ಸೋಮವಾರ ಕೋರ್ಟ್ಗೆ ಜಮೆ ಮಾಡುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಸದ್ಯ ಈ ಹಣ ಪೊಲೀಸರ ವಶದಲ್ಲಿದೆ. ಅಧ್ಯಕ್ಷರ ಅರಮನೆಯಲ್ಲಿ ಸೂಟ್ಕೇಸ್ ತುಂಬ ದಾಖಲಾತಿಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.
ದೇಶದ ಹೊಸ ಅಧ್ಯಕ್ಷರ ಆಯ್ಕೆಯನ್ನು ಜುಲೈ 20ಕ್ಕೆ ನಡೆಸಲು ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ. ಜುಲೈ 15ರಂದು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಧಿಕೃತವಾಗಿ ಅಧ್ಯಕ್ಷರ ಆಯ್ಕೆ ದಿನಾಂಕವನ್ನು ಘೋಷಿಸಲಿದೆ. ಜುಲೈ 19ರ ವರೆಗೆ ನಾಮಪತ್ರ ಸಲ್ಲಿಸಬಹುದು.
| ಮಹಿಂದ ಯಾಪಾ ಅಬೇವರ್ಧನ ಸಂಸತ್ ಸ್ಪೀಕರ್
ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಜನರ ವಿನೋದಾವಳಿಅಧ್ಯಕ್ಷರ ಅರಮನೆಯಲ್ಲಿ ಜನಜಂಗುಳಿ: ಅಧ್ಯಕ್ಷರ ನಿವಾಸಕ್ಕೆ ನುಗ್ಗಿರುವ ಜನರು ಗೋತಬಯ ರಾಜೀನಾಮೆ ನೀಡುವವರೆಗೂ ತೆರವು ಮಾಡುವುದಿಲ್ಲ ಎಂಬ ಪಟ್ಟನ್ನು ಮುಂದುವರಿಸಿದ್ದಾರೆ. ಅರಮನೆ ಆವರಣದಲ್ಲಿ ಅಡುಗೆ ಸಿದ್ಧಪಡಿಸಿ ಉಣ್ಣುತ್ತಿದ್ದಾರೆ. ಸೋಫಾಗಳಲ್ಲಿ ಕುಳಿತು ಫೋಟೋ, ಸೆಲ್ಪಿ ತೆಗೆದು ಕೊಳ್ಳುವುದು, ಈಜುಕೊಳದಲ್ಲಿ ಈಜಾಟ, ಜಿಮ್ೆ ನುಗ್ಗಿ ಕಸರತ್ತು ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಸರ್ವಪಕ್ಷಗಳ ಸರ್ಕಾರ, ಮುನ್ನಡೆಸಲು ಸಿದ್ಧವೆಂದ ಎಸ್ಜೆಬಿ: ಸರ್ವಪಕ್ಷಗಳು ಸೇರಿ ರಚಿಸಲಿರುವ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲು ಸಿದ್ಧ ಎಂದು ಪ್ರಮುಖ ವಿರೋಧ ಪಕ್ಷ ಎಸ್ಜೆಬಿ ಹೇಳಿದೆ. ಆದರೆ, ಯಾವುದೇ ಪಕ್ಷ ವಿಶ್ವಾಸಘಾತ ಮಾಡಬಾರದು. ಹಾಗೇನಾದರೂ ಆದರೆ ಅದು ರಾಷ್ಟ್ರದ್ರೋಹವಾಗುತ್ತದೆ ಎಂದು ಎಚ್ಚರಿಸಿದೆ. ಹೊಸ ಸರ್ಕಾರ ರಚನೆಗೂ ಮುನ್ನ ವಿಕ್ರಮಸಿಂಘ ಅವರ ಸಂಪುಟ ರಾಜೀನಾಮೆ ನೀಡಿ, ಜವಾಬ್ದಾರಿಯನ್ನು ಹೊಸ ಸರ್ಕಾರಕ್ಕೆ ವಹಿಸಲಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ಈ ಮೊದಲು ಘೋಷಣೆ ಮಾಡಿರುವಂತೆ ಅಧ್ಯಕ್ಷ ಗೋತಬಯ ರಾಜಪಕ್ಸ ಜುಲೈ 13ರಂದು ರಾಜೀನಾಮೆ ನೀಡಲಿದ್ದಾರೆ. ಸರ್ವ ಪಕ್ಷಗಳ ಸರ್ಕಾರ ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ.
| ರನಿಲ ವಿಕ್ರಮಸಿಂಘ ಉಸ್ತುವಾರಿ ಪ್ರಧಾನಿ
ಸೇನೆ ಕಳಿಸಿಲ್ಲವೆಂದ ಭಾರತ: ನಾಗರಿಕ ದಂಗೆಯಂತಹ ಪರಿಸ್ಥಿತಿ ಎದುರಿಸುತ್ತಿರುವ ಲಂಕಾಕ್ಕೆ ಭಾರತ ಸೇನೆ ಕಳುಹಿಸಿದೆ ಎಂಬ ಸುದ್ದಿ ಸುಳ್ಳು ಎಂದು ಕೊಲಂಬೊದಲ್ಲಿರುವ ಭಾರತದ ಹೈಕಮಿಷನ್ ಸ್ಪಷ್ಟಪಡಿಸಿದೆ. ಶ್ರೀಲಂಕಾಕ್ಕೆ ಭಾರತದಿಂದ ಸೇನೆ ರವಾನೆ ಆಗಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಆದರೆ ಇದು ಊಹಾಪೋಹ ಎಂದು ಹೈಕಮಿಷನ್ ಟ್ವೀಟ್ ಮಾಡಿದೆ.