ಜಾಗತಿಕ ಗೋದಿ ಬಿಕ್ಕಟ್ಟಿನಿಂದ ದೇಶಿಯ ಮಾರುಕಟ್ಟೆಗಳಿಗೆ ರಕ್ಷಣೆಯೊದಗಿಸಲು ಸರಕಾರವು ಗೋದಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಲಿದೆ.
ಉಕ್ರೇನ್ ಮೇಲೆ ರಷ್ಯದ ಆಕ್ರಮಣದಿಂದ ಜಾಗತಿಕ ಕೊರತೆಗಳು ಮತ್ತು ಬೆಲೆ ಏರಿಕೆಯಿಂದಾಗಿ ರಾಷ್ಟ್ರಿಯ ಆಹಾರ ಮೀಸಲನ್ನು ಹೆಚ್ಚಿಸಲು ಮೇ ತಿಂಗಳಲ್ಲಿ ಗೋದಿ ರಫ್ತುಗಳನ್ನು ತೀವ್ರವಾಗಿ ಮೊಟಕುಗೊಳಿಸಲಾಗಿತ್ತು.
ಗೋದಿ ಮತ್ತು ಗೋದಿ ಹಿಟ್ಟಿನ ಜಾಗತಿಕ ಪೂರೈಕೆಯಲ್ಲಿನ ಅಡೆತಡೆಗಳು ಹಲವಾರು ಹೊಸ ರಫ್ತು ದೇಶಗಳನ್ನು ಸೃಷ್ಟಿಸಿವೆ ಮತ್ತು ಇದು ಬೆಲೆಗಳಲ್ಲಿ ಏರಿಳಿತಗಳು ಹಾಗೂ ಸಂಭಾವ್ಯ ಗುಣಮಟ್ಟ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಿದೆ. ಹೀಗಾಗಿ ಭಾರತದಿಂದ ರಫ್ತಾಗುವ ಗೋದಿ ಹಿಟ್ಟಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮಹಾ ನಿರ್ದೇಶನಾಲಯವು ಬುಧವಾರ ಹೊರಡಿಸಿರುವ ನೋಟಿಸ್ನಲ್ಲಿ ತಿಳಿಸಿದೆ.
ಭಾರತವು ಮೇ ತಿಂಗಳಿನಲ್ಲಿ ಸರಕಾರದ ಅನುಮೋದನೆಯಿಲ್ಲದೆ ಗೋದಿಯ ಎಲ್ಲ ರಫ್ತುಗಳನ್ನು ನಿಷೇಧಿಸಿದ್ದು,ಇದು ಜಾಗತಿಕ ಬೆಲೆಗಳಲ್ಲಿ ಏರಿಕೆ ಮತ್ತು ಇತರ ದೇಶಗಳಿಂದ ಖಂಡನೆಗೆ ಕಾರಣವಾಗಿತ್ತು.
ಜಾಗತಿಕ ಗೋದಿ ಪೂರೈಕೆಯಲ್ಲಿ ರಷ್ಯ ಮತ್ತು ಉಕ್ರೇನ್ ಒಟ್ಟಾಗಿ ಕಾಲುಭಾಗ ಪಾಲನ್ನು ಹೊಂದಿವೆ. ಆದರೆ ಅವುಗಳ ನಡುವೆ ನಡೆಯುತ್ತಿರುವ ಯುದ್ಧವು ಪೂರೈಕೆ ಸರಪಳಿಗೆ ವ್ಯತ್ಯಯವನ್ನುಂಟು ಮಾಡಿದೆ ಮತ್ತು ಜಾಗತಿಕ ಕೊರತೆಗೆ ಕಾರಣವಾಗಿದೆ.
ಚೀನಾದ ನಂತರ ವಿಶ್ವದ ಎರಡನೇ ಅತಿ ದೊಡ್ಡ ಗೋದಿ ಉತ್ಪಾದಕ ದೇಶವಾಗಿರುವ ಭಾರತದಲ್ಲಿ ಕಳೆದ ವರ್ಷ 109 ಮಿಲಿಯನ್ ಟನ್ ಗೋದಿ ಉತ್ಪಾದನೆಯಾಗಿದ್ದರೂ,ಸುಮಾರು ಏಳು ಮಿಲಿಯನ್ ಟನ್ಗಳಷ್ಟನ್ನು ಮಾತ್ರ ರಫ್ತು ಮಾಡಲಾಗಿತ್ತು.
ಮಾರ್ಚ್ ಮತ್ತು ಎಪ್ರಿಲ್ನಲ್ಲಿ ಉಷ್ಣಮಾರುತದಿಂದಾಗಿ ಗೋದಿಯ ಇಳುವರಿ ಶೇ.5ರಷ್ಟು ಕುಸಿದಿದ್ದು,ಇದು ದೇಶಿಯ ಮಾರುಕಟ್ಟೆಯಲ್ಲಿ ಧಾನ್ಯದ ಕೊರತೆಯ ಭೀತಿಯನ್ನು ಸೃಷ್ಟಿಸಿತ್ತು.