ಮಲಪ್ಪುರಂ: ನಿಜವಾದ ಪ್ರೀತಿಯು ಜಾತಿ, ಬಣ್ಣ, ಭಾಷೆ ಮತ್ತು ವಯಸ್ಸು ಎಲ್ಲವನ್ನು ಮೀರಿದ್ದು. ಅಲ್ಲದೆ, ಪ್ರೀತಿಗೆ ಯಾವುದೇ ಗಡಿ ಇಲ್ಲ ಎಂಬ ಮಾತಿಗೆ ಇವರಿಬ್ಬರ ಲವ್ ಸ್ಟೋರಿ ತಾಜಾ ಉದಾಹರಣೆಯಾಗಿದೆ.
ಹೌದು, ಕೇರಳ ಮೂಲದ ಒಲಂಪಿಯನ್ ಆಕಾಶ್ ಎಚ್ ಮಾಧವನ್ (32) ಹಾಗೂ ಇಂಡೋನೇಷ್ಯಾ ಮೂಲದ ದೆವಿ ಸಿಟಿ ಸೆಂದರಿ (26) ಇಬ್ಬರು ಅಂಗಡಿಪ್ಪುರಂನಲ್ಲಿರುವ ಥಿರುಮಂಧಮಕುನ್ನು ಭಗವತಿ ದೇವಸ್ಥಾನದಲ್ಲಿ ಶುಕ್ರವಾರ ಸಪ್ತಪದಿ ತುಳಿದಿದ್ದಾರೆ.
ಅಂದಹಾಗೆ ಮಾಧವನ್ ಅವರು 2013 ಮತ್ತು 2017ರಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ, ಹಲವು ಪದಕಗಳನ್ನು ಜಯಿಸಿದ್ದಾರೆ. ಫೇಸ್ಬುಕ್ನಲ್ಲಿ ಮ್ಯೂಚುವಲ್ ಫ್ರೆಂಡ್ ಮೆರಿನ್ ಎಂಬುವರ ಮೂಲಕ ಸೆಂದರಿ ಮತ್ತು ಮಾಧವನ್ ಫ್ರೆಂಡ್ಸ್ ಆದರು. ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್ ಸಾಮಾನ್ಯವಾಗಿತ್ತು. ದಿನ ಕಳೆದಂತೆ ಇಬ್ಬರ ಫ್ರೆಂಡ್ಸ್ಶಿಫ್ ಪ್ರೀತಿಗೆ ತಿರುಗಿತು. ಇದೀಗ ಎರಡು ಕುಟುಂಬಗಳನ್ನು ಒಪ್ಪಿಸಿ, ಇಬ್ಬರು ಮದುವೆ ಆಗಿದ್ದಾರೆ.
ಸೆಂದರಿ ಇಂಡೋನೇಷ್ಯಾದ ಸುರಬಯಾ ಮೂಲದವರು. ಇಂಡೋನೇಷ್ಯಾದ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಹರ್ತೊಯೋ-ಸಿತಿ ದಂಪತಿ ಮೂರನೇ ಹಾಗೂ ಕಿರಿಯ ಮಗಳು. ಸೆಂದರಿಗೆ ಇಬ್ಬರು ಅಕ್ಕಂದಿರಿದ್ದಾರೆ. ಆಕಾಶ್, ಪೆರಿಂಥಲಮನ್ನದಲ್ಲಿ ಆಯುರ್ವೇದಿಕ್ ಮತ್ತು ಕಾಸ್ಮೆಟಿಕ್ ಉತ್ಪನ್ನಗಳ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ. ಅಲ್ಲದೆ, ಮಲಪ್ಪುರಂನ ಜಿಲ್ಲಾ ಕ್ರೀಡಾ ಮಂಡಳಿಯ ಸಂಚಾಲಕರಾಗಿದ್ದಾರೆ. 2020ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೆಲತ್ತೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮಾಧವನ್, ಮೆಲತ್ತೂರು ನಿವಾಸಿಗಳಾದ ಸೇಥುಮಾಧವನ್ ಮತ್ತು ಗೀತಾ ದಂಪತಿಯ ಪುತ್ರ. 2013ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಡಿಸ್ಕಸ್ ಎಸೆತದಲ್ಲಿ ಮಾಧವನ್ ಕಂಚಿನ ಪದಕ ಜಯಿಸಿದ್ದರು. ಅಲ್ಲದೆ, 2017 ರಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚು ಗೆದ್ದಿದ್ದಾರೆ.