ಪತ್ತನಂತಿಟ್ಟ: ಚಿನ್ನ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮುಖ್ಯಮಂತ್ರಿ, ಅವರ ಕುಟುಂಬ ಹಾಗೂ ಪ್ರಧಾನ ಕಾರ್ಯದರ್ಶಿ ಆರೋಪಿಯಾಗಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. ಶೋಭಾ ಕರಂದ್ಲಾಜೆ ಮಾತನಾಡಿ, ಘಟನೆಯಲ್ಲಿ ಸಮಗ್ರ ತನಿಖೆಯಾಗಬೇಕಾದರೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪಕ್ಕಕ್ಕೆ ನಿಲ್ಲಬೇಕು ಎಂದು ಹೇಳಿರುವರು.
ಪತ್ತನಂತಿಟ್ಟ ಪ್ರೆಸ್ ಕ್ಲಬ್‍ನಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರು ಮಾತನಾಡಿದರು. ಸ್ವಪ್ನಾ ಸುರೇಶ್ ಅವರ 164 ಹೇಳಿಕೆಗಳು ಬೊಟ್ಟುಮಾಡುವುದು ಮುಖ್ಯಮಂತ್ರಿ ಕುಟುಂಬದ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ. ಹಾಗಾಗಿ ಮುಖ್ಯಮಂತ್ರಿ ಕುಟುಂಬವನ್ನೂ ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು. ಮುಖ್ಯಮಂತ್ರಿ ಯುಎಇ ಕಾನ್ಸುಲೇಟ್ ಮತ್ತು ರಾಜತಾಂತ್ರಿಕ ಒಪ್ಪಂದಗಳನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಶೋಭಾ ಟೀಕಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದು, ಮುಖ್ಯಮಂತ್ರಿಯ ಸ್ಪಷ್ಟ ಪಾತ್ರವಿದೆ. ಕೇಂದ್ರೀಯ ಸಂಸ್ಥೆ ಇ.ಡಿ. ಪ್ರಕರಣವನ್ನು ಬುಡಮೇಲು ಮಾಡಿದೆ ಎಂಬ ಆರೋಪ ಸುಳ್ಳು. ತನಿಖೆ ಇನ್ನೂ ಮುಂದುವರಿದಿದೆ. ಪ್ರಕರಣದ ತನಿಖೆ ವಿಳಂಬವಾಗಲು ಕೇರಳ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಂಟು ಕಾರಣ ಎಂಬ ಆರೋಪ ನಿರಾಧಾರ. ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರದ ನೀತಿ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಭಾರತದ ಪ್ರಧಾನಿಯಾದಾಗಲೂ ಭ್ರಷ್ಟಾಚಾರ ರಹಿತ ಆಡಳಿತವನ್ನು ತೋರಿಸಿದ್ದಾರೆ. ಹಾಗಾಗಿ ಅಂತಹವರ ಜತೆ ಕೇಂದ್ರ ಸರ್ಕಾರ ಯಾವುದೇ ಸಂಬಂಧ ಹೊಂದಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.