ತಿರುವನಂತಪುರ: ಅಂತಃಕಲಹ ಗಗನಮುಳಿಯಾಗಿದ್ದು, ಶ್ರೀಲಂಕಾದಲ್ಲಿ ತಡರಾತ್ರಿಯಾದರೂ ಪ್ರತಿಭಟನೆಯ ಕಾವು ಜೋರಾಗಿದೆ. ಪ್ರತಿಭಟನಾಕಾರರು ರಸ್ತೆಗಳನ್ನು ಆಕ್ರಮಿಸಿಕೊಂಡು ಮಾಜಿ ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದೆ.
ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ಕೊಲಂಬೊ ಕರಾವಳಿಯಲ್ಲಿ ಮಿಲಿಟರಿ ಹಡಗಿನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ಹದಗೆಡುತ್ತಿದ್ದಂತೆ ದ್ವೀಪ ರಾಷ್ಟ್ರದ ಜನರು ಗುಳೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಶ್ರೀಲಂಕಾದವರು ತಮ್ಮ ಜೀವನೋಪಾಯ ಹದಗೆಟ್ಟಿರುವುದರಿಂದ ತಮ್ಮ ತಾಯ್ನಾಡನ್ನು ತೊರೆದು ಬೇರೆ ದೇಶಗಳಿಗೆ ಪಲಾಯನ ಮಾಡಲು ನಿರ್ಧರಿಸಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇರಳದಲ್ಲೂ ಎಚ್ಚರಿಕೆ ನೀಡಲಾಗಿದೆ. ಶ್ರೀಲಂಕಾದಿಂದ ಸಮುದ್ರದ ಮೂಲಕ ಜನರು ಕೇರಳ ತಲುಪುವ ಸಾಧ್ಯತೆಯ ನಿರೀಕ್ಷೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಮೀನುಗಾರರ ಜಾಗೃತ ಸಮಿತಿಗಳಿಗೂ ಎಚ್ಚರಿಕೆ ನೀಡಲಾಗಿದೆ. ಯಾವುದೇ ಅನುಮಾನಾಸ್ಪದ ದೋಣಿಗಳು ಅಥವಾ ಯಾವುದಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ವರದಿ ಮಾಡಲು ಸೂಚಿಸಲಾಗಿದೆ.