ನವದೆಹಲಿ: ಕಳೆದ ಕೆಲವು ವಾರಗಳಲ್ಲಿ ದೇಶೀಯ ವಿಮಾನಗಳು ಎದುರಿಸಿದ ತಾಂತ್ರಿಕ ದೋಷಗಳು ದೊಡ್ಡಮಟ್ಟದಲ್ಲಿ ಅಪಾಯ ಉಂಟುಮಾಡುವಂತಿರಲಿಲ್ಲ. ಭಾರತಕ್ಕೆ ಆಗಮಿಸುವ ವಿದೇಶಿ ವಿಮಾನಗಳಲ್ಲೂ ಕಳೆದ 16 ದಿನಗಳಲ್ಲಿ 15 ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮುಖ್ಯಸ್ಥ ಅರುಣ್ ಕುಮಾರ್ ಭಾನುವಾರ ತಿಳಿಸಿದ್ದಾರೆ.
ದೇಶದ ವಿಮಾನಯಾನ ವ್ಯವಸ್ಥೆ ಅತ್ಯಂತ ಸುರಕ್ಷಿತವಾಗಿದ್ದು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಐಸಿಎಒ) ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿದೆ. ಇತ್ತೀಚೆಗೆ ಪತ್ತೆಯಾದ ಎಲ್ಲಾ ರೀತಿಯ ತಾಂತ್ರಿಕ ದೋಷಗಳು ಸಾಮಾನ್ಯವಾದವು. ಈ ಬಗ್ಗೆ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.
ಕೊರೊನಾ ಸಾಂಕ್ರಾಮಿಕ ನಂತರ ದೇಶೀಯ ವಿಮಾನಯಾನ ಕ್ಷೇತ್ರ ಪುನಃಶ್ಚೇತನಗೊಳ್ಳುತ್ತಿದ್ದು, ದೇಶದ ವಾಯು ಸರಹದ್ದಿನಲ್ಲಿ ನಿತ್ಯ 6000ಕ್ಕೂ ಹೆಚ್ಚು ವಿಮಾನಗಳು ಸಂಚರಿಸುತ್ತಿವೆ.