ಅಗ್ನಿಪಥ ಯೋಜನೆ ಮೂಲಕ ಮಿಲಿಟರಿ ಸೇವೆಗಳಿಗೆ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ನಾಲ್ಕು ವರ್ಷಗಳ ಈ ಅಲ್ಪಕಾಲದ ನೇಮಕಾತಿ ವಿರೋಧಿಸಿ ಪ್ರತಿಭಟನೆಗಳು ಕೂಡ ನಡೆದಿವೆ.
ಅಮೆರಿಕ
ಕನಿಷ್ಠ ಸೇವಾವಧಿ 4 ವರ್ಷ
ವಿಯೆಟ್ನಾಂ ಯುದ್ಧದ ನಂತರ, ನಾಗರಿಕರು ಕಡ್ಡಾಯವಾಗಿ ಸೇನೆಗೆ ಸೇರಬೇಕೆಂಬ ನಿಯಮವನ್ನೇನು ಅಮೆರಿಕ ಸರ್ಕಾರ ಜಾರಿಗೆ ತಂದಿಲ್ಲ. ಆದರೆ, ಇಂತಹ ಆದೇಶ ನೀಡುವ ಅಧಿಕಾರವನ್ನು ಉಳಿಸಿಕೊಂಡಿದೆ. ಸದ್ಯ 17 ವರ್ಷ ಮೇಲ್ಪಟ್ಟವರು ಸ್ವಇಚ್ಛೆಯಿಂದ ಮಿಲಿಟರಿ ಸೇರಬಹುದು. ಗರಿಷ್ಠ ವಯಸ್ಸು ನೌಕಾಪಡೆಯಲ್ಲಿ 28 ಆಗಿದ್ದರೆ, ವಾಯುಪಡೆಯಲ್ಲಿ 39 ವರ್ಷ. ಸಾಮಾನ್ಯವಾಗಿ ನಾಲ್ಕು ವರ್ಷಗಳ ಕಾಲ ಸಕ್ರಿಯವಾಗಿ ಕರ್ತವ್ಯ ನಿಭಾಯಿಸಬೇಕಾಗುತ್ತದೆ. ಇದಲ್ಲದೆ, ಮತ್ತೆ ನಾಲ್ಕು ವರ್ಷಗಳ ಕಾಲ ಮೀಸಲು ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನಂತರ ಸೇವೆಯಲ್ಲಿ ಮುಂದುವರಿಯಲು ಒಪ್ಪಂದವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
ಪಿಂಚಣಿ: ಪೂರ್ಣ ಸೇವೆಗೆ ಆಯ್ಕೆ ಮಾಡಿಕೊಳ್ಳುವ ಸೈನಿಕರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಪಿಂಚಣಿ ಹಾಗೂ ಸೌಲಭ್ಯಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. 2018ರಿಂದ ಎರಡು ರೀತಿಯ ನೇಮಕಾತಿ ವ್ಯವಸ್ಥೆಗಳಿವೆ.
ಒಂದು - ಬ್ಲೆಂಡೆಡ್ ರಿಟೈರ್ವೆುಂಟ್ ಸಿಸ್ಟಂ (ಸಂಯೋಜಿತ ನಿವೃತ್ತಿ ವ್ಯವಸ್ಥೆ); ಇನ್ನೊಂದು- ಡಿಫೈನ್ಡ ಬೆನಿಫಿಟ್ ಸಿಸ್ಟಂ (ಮಿತಿ ನಿರ್ಧರಿಸಿದ ಪ್ರಯೋಜನಕಾರಿ ವ್ಯವಸ್ಥೆ), ಹೈ 3 ಎಂದೂ ಇದನ್ನು ಕರೆಯುತ್ತಾರೆ.
20 ವರ್ಷಗಳ ಸೇವೆಯ ನಂತರ ನೀಡುವ ಪಿಂಚಣಿ ಸೌಲಭ್ಯಗಳು ಬಹಳಷ್ಟು ಉದಾರವಾಗಿವೆ. ಆದರೆ, ಶೇ. 17ರಷ್ಟು ಸೇನಾ ಸಿಬ್ಬಂದಿ ಮಾತ್ರ ಇಷ್ಟೊಂದು ಸುದೀರ್ಘ ಕಾಲ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ, ಕಡಿಮೆ ಅವಧಿ ಸೇವೆ ಸಲ್ಲಿಸಬಯಸುವವರನ್ನು ಸೆಳೆಯುವ ನಿಟ್ಟಿನಲ್ಲಿ ಬಿಆರ್ಎಸ್ ಜಾರಿಗೊಳಿಸಲಾಗಿದೆ. ಬಿಆರ್ಎಸ್ನಲ್ಲಿ, ಸಿಬ್ಬಂದಿಯು ಪಿಂಚಣಿ ಯೋಜನೆಗೆ ತಮ್ಮ ವಂತಿಗೆ ನೀಡಬೇಕು ಹಾಗೂ ಸರ್ಕಾರ ಕೂಡ ಇದಕ್ಕೆ ಸಮನಾದ ಅನುದಾನವನ್ನು ನೀಡುತ್ತದೆ. ಈ ಮೂಲಕ ಅಮೆರಿಕದ ಎಲ್ಲ ಸೇನಾ ಸಿಬ್ಬಂದಿ ಕೆಲ ನಿವೃತ್ತಿ ಉಳಿತಾಯದೊಂದಿಗೆ ಸೇವೆಯನ್ನು ಪೂರೈಸಬಹುದಾಗಿದೆ.
ಚೀನಾ
ತಂತ್ರಜ್ಞಾನಸ್ನೇಹಿ ಸಿಬ್ಬಂದಿಯತ್ತ ಒಲವು
ಜಗತ್ತಿನ ಅತಿದೊಡ್ಡ ಸೇನೆಯನ್ನು ಚೀನಾ ಹೊಂದಿದೆ. ಭೂಸೇನೆಯ ಪ್ರಮಾಣವನ್ನು ಕಡಿತಗೊಳಿಸಿ, ವಾಯು ಮತ್ತು ನೌಕಾಪಡೆಗಳ ಗಾತ್ರವನ್ನು ಹೆಚ್ಚಿಸಲು ಈಗ ಕ್ರಮ ಕೈಗೊಳ್ಳುತ್ತಿದೆ. ಪೀಪಲ್ಸ್ ಲಿಬರೇಷನ್ ಆರ್ವಿುಯು (ಪಿಎಲ್ಎ)2017ರ ಜುಲೈನಿಂದ 3 ಲಕ್ಷ ಸೈನಿಕರನ್ನು ಕಡಿತಗೊಳಿಸಿದೆ ಎಂದು 2018ರಲ್ಲಿ ಪ್ರಕಟಗೊಂಡ ವರದಿಯೊಂದರಲ್ಲಿ ಹೇಳಲಾಗಿದೆ. ತಂತ್ರಜ್ಞಾನ =ಸ್ನೇಹಿ ಸಿಬ್ಬಂದಿಯನ್ನು ಹೆಚ್ಚಿಸಲು ಪಿಎಲ್ಎ ಗಮನ ನೀಡುತ್ತಿದೆ. ಕಡ್ಡಾಯ ಸೇನಾ ಸೇವೆ ಆದೇಶವನ್ನು ಚೀನಾ ಹೊರಡಿಸಿಲ್ಲವಾದರೂ ಅಗತ್ಯ ಇರುವಾಗ ಭೂಸೇನೆಯಲ್ಲಿ 3 ವರ್ಷ ಹಾಗೂ ವಾಯು- ನೌಕಾ ಪಡೆಯಲ್ಲಿ 4 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಆದರೆ, ಸ್ವಇಚ್ಛೆಯಿಂದ ಸೇನೆಗೆ ಸೇರಿರುವವರು 8ರಿಂದ 12 ವರ್ಷಗಳ ಕಾಲ (ಗರಿಷ್ಠ 35 ವರ್ಷ) ಸಕ್ರಿಯ ಸೇವೆಯಲ್ಲಿ ತೊಡಗುತ್ತಿದ್ದಾರೆ.
ಪಿಂಚಣಿ: ಸಬ್ಸಿಡಿ, ವೈದ್ಯಕೀಯ ನೆರವು, ವಿಮೆ ಸೌಲಭ್ಯವಿದೆ. ನಿವೃತ್ತ ಸಿಬ್ಬಂದಿ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸಲು ಸಬ್ಸಿಡಿ ದರದಲ್ಲಿ ಸಾಲ ದೊರೆಯುತ್ತದೆ. ತೆರಿಗೆ ವಿನಾಯಿತಿ, ಅಲ್ಲದೆ, ವ್ಯಾಪಾರ ಆರಂಭಿಸಲು ತರಬೇತಿಯೂ ದೊರೆಯುತ್ತದೆ. ನಿವೃತ್ತಿ ನಂತರದ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವಂತೆ ಚೀನಾದಲ್ಲಿ ನಿವೃತ್ತ ಸೈನಿಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ.
ಜರ್ಮನಿ
ಕಡ್ಡಾಯ ಸೇವೆ ಸ್ಥಗಿತ
1956ರಿಂದ 2011ರವರೆಗೆ ಜರ್ಮನಿಯಲ್ಲಿ ಮಿಲಿಟರಿ ಸೇವೆ ಕಡ್ಡಾಯವಾಗಿತ್ತು. 2011ರಿಂದ ಈ ನಿಯಮ ರದ್ದುಪಡಿಸಲಾಗಿದೆ. ಆದರೆ, ಅಗತ್ಯ ಉಂಟಾದರೆ ಕಡ್ಡಾಯ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಕಡ್ಡಾಯ ಸೇವೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಪುರುಷರು ಕನಿಷ್ಠ 6 ತಿಂಗಳು ಮಿಲಿಟರಿಯಲ್ಲಿ ಇಲ್ಲವೇ ನಾಗರಿಕ ರಕ್ಷಣಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಬೇಕಿತ್ತು. ನಾಜಿ ಆಡಳಿತದ ಸಂದರ್ಭದಲ್ಲಿ ತುಳಿತಕ್ಕೆ ಒಳಗಾದವರಿಗೆ ಇದರಿಂದ ವಿನಾಯಿತಿ ನೀಡಲಾಗಿತ್ತು. ಕಡ್ಡಾಯ ನಿಯಮ ಸ್ಥಗಿತಗೊಳಿಸಿದ ನಂತರ ಜರ್ಮನ್ ಮಿಲಿಟರಿಯು ಮಾನವಶಕ್ತಿಯ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ನಿಭಾಯಿಸುವುದಕ್ಕಾಗಿ ಕಡಿಮೆ ವಯಸ್ಸಿನ ವರನ್ನು ಹಾಗೂ ವಿದೇಶಿಗರನ್ನು ನೇಮಕ ಮಾಡಿಕೊಳ್ಳುತ್ತಿದೆ.
ಇಂಗ್ಲೆಂಡ್
2 ವರ್ಷ ನಂತರ ಪಿಂಚಣಿ ಸೌಲಭ್ಯ
18 ವರ್ಷದೊಳಗಿನವರನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುವ ಏಕೈಕ ಐರೋಪ್ಯ ರಾಷ್ಟ್ರ ಇಂಗ್ಲೆಂಡ್. ನೇಮಕಾತಿಗೆ ಕನಿಷ್ಠ ವಯಸ್ಸು 16. ಬ್ರಿಟನ್ ಸೇನಾ ನಿಯಮ ಪ್ರಕಾರ, 16-17ನೇ ವಯಸ್ಸಿನಲ್ಲಿ ನೇಮಕಗೊಂಡವರು 22ನೇ ವಯಸ್ಸಿನವರೆಗಾದರೂ ಸೇವೆಯಲ್ಲಿ ಮುಂದುವರಿಯಬೇಕು. ಭೂಸೇನೆಯಲ್ಲಿ ಕನಿಷ್ಠ ಸೇವಾವಧಿ 4 ವರ್ಷವಾಗಿದ್ದರೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ತರಬೇತಿಯ ನಂತರ 3ರಿಂದ 3.5 ವರ್ಷ ಆಗಿರುತ್ತದೆ. ಸಕ್ರಿಯ ಸೇವೆಯ ನಂತರ ಸಿಬ್ಬಂದಿ 6 ವರ್ಷಗಳ ಕಾಲ ಮೀಸಲು ಸೇವೆಯಲ್ಲಿ ಮುಂದುವರಿಯುತ್ತಾರೆ.
ಪಿಂಚಣಿ: ವೇತನದ ಮೊದಲ ದಿನದಿಂದಲೇ ಪಿಂಚಣಿ ಸೌಲಭ್ಯಗಳನ್ನು ಸಂಗ್ರಹಿಸ ತೊಡಗಲಾಗುತ್ತದೆ. ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ನಂತರ ಪಿಂಚಣಿ ಪಡೆಯಲು ಅರ್ಹತೆ ದೊರೆಯುತ್ತದೆ.
ರಷ್ಯಾ
ಕಡ್ಡಾಯ- ಗುತ್ತಿಗೆಯ ಸಮ್ಮಿಶ್ರಣ
18ರಿಂದ 27 ವರ್ಷದ ಎಲ್ಲ ಪುರುಷರಿಗೆ ಕನಿಷ್ಠ 12 ತಿಂಗಳುಗಳ ಕಾಲ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯವಾಗಿ ಯುದ್ಧೇತರ ಕಾರ್ಯಗಳಿಗೆ ಇವರನ್ನು ಬಳಸಿಕೊಳ್ಳಲಾಗುತ್ತದೆ. ಆರೋಗ್ಯ ಸಮಸ್ಯೆ ಹಾಗೂ ಉನ್ನತ ಶಿಕ್ಷಣ ಆಧಾರಿತವಾಗಿ ಇದಕ್ಕೆ ವಿನಾಯಿತಿ ಕೂಡ ಕಲ್ಪಿಸಲಾಗಿದೆ. ವೃತ್ತಿಪರ ಸೈನಿಕರನ್ನು ಗುತ್ತಿಗೆಯಾಧಾರಿತವಾಗಿಯೂ ನೇಮಕ ಮಾಡಿಕೊಳ್ಳಲಾಗುತ್ತದೆ. ಉನ್ನತ ತರಬೇತಿ ನೀಡಿದ ನಂತರ ಇವರನ್ನು ಯುದ್ಧ ಸ್ಥಳಗಳಿಗೆ ನಿಯೋಜಿಸಲಾಗುತ್ತದೆ. ಪ್ರಸ್ತುತ ಯೂಕ್ರೇನ್ ಯುದ್ಧದಲ್ಲಿ ಕಡ್ಡಾಯವಾಗಿ ನೇಮಕಗೊಂಡವರನ್ನೂ ನಿಯೋಜಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಸೇವಾ ವಯೋಮಿತಿ ರಷ್ಯಾದ ನಾಗರಿಕರಿಗೆ 18ರಿಂದ 40 ಹಾಗೂ ವಿದೇಶಿಯರಿಗೆ 18ರಿಂದ 30 ವರ್ಷ ಇದೆ. ಪ್ರಸ್ತುತ ಈ ನಿಯಮವನ್ನು ತಡೆಹಿಡಿಯಲಾಗಿದ್ದು, 40 ವರ್ಷ ಮೇಲ್ಪಟ್ಟವರು ಕೂಡ ಈಗ ಮಿಲಿಟರಿಯನ್ನು ಸೇರಬಹುದಾಗಿದೆ.
ಪಿಂಚಣಿ: ದೀರ್ಘಾವಧಿ ಸೇವೆಯ ರಾಷ್ಟ್ರೀಯ ಪಿಂಚಣಿಯನ್ನು ಯೋಧರು, ಪೈಲಟ್ಗಳಿಗೆ ನೀಡಲಾಗುತ್ತದೆ. ಸಾವನ್ನಪ್ಪಿದ ಸೈನಿಕನ ಕುಟುಂಬದ ನಿರುದ್ಯೋಗಿ ಸದಸ್ಯರಿಗೂ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಇದಲ್ಲದೆ, ಅಂಗವೈಕಲ್ಯ ಪಿಂಚಣಿಯನ್ನೂ ನೀಡಲಾಗುತ್ತದೆ.