ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ವಿರುದ್ಧ ಸುಪ್ರೀಂ ಕೋರ್ಟ್ ದೂಷಣೆಗೆ ಸಮಾಜದ ಒಂದು ವರ್ಗದಿಂದ ಆಕ್ಷೇಪ ವ್ಯಕ್ತವಾದ ಹಿಂದೆಯೇ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಧಿಕಾರಿಗಳನ್ನು ಒಳಗೊಂಡ ಗುಂಪೊಂದು 'ತೀಸ್ತಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆ' ಸರಿ ಎಂದಿದೆ.
ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ವಿರುದ್ಧ ಸುಪ್ರೀಂ ಕೋರ್ಟ್ ದೂಷಣೆಗೆ ಸಮಾಜದ ಒಂದು ವರ್ಗದಿಂದ ಆಕ್ಷೇಪ ವ್ಯಕ್ತವಾದ ಹಿಂದೆಯೇ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಧಿಕಾರಿಗಳನ್ನು ಒಳಗೊಂಡ ಗುಂಪೊಂದು 'ತೀಸ್ತಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆ' ಸರಿ ಎಂದಿದೆ.
ಸುಪ್ರೀಂ ಕೋರ್ಟ್ ಕ್ರಮದ ವಿರುದ್ಧ ಸಮಾಜದ ಒಂದು ವರ್ಗವು ವ್ಯಕ್ತಪಡಿಸಿರುವ ಅಭಿಪ್ರಾಯವು ರಾಜಕೀಯ ಉದ್ದೇಶದ್ದಾಗಿದೆ ಎಂದು ಮಾಜಿ ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ 190 ಜನರ ಸಮೂಹ ಈ ಸಂಬಂಧ ಜಂಟಿ ಹೇಳಿಕೆಯನ್ನು ನೀಡಿದೆ.
ತೀಸ್ತಾ ಮತ್ತು ಇತರರ ವಿರುದ್ಧ ಕಾನೂನು ಪರಿಮಿತಿಯಲ್ಲಿಯೇ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ, ಆರೋಪಿಯು ನ್ಯಾಯಾಂಗ ವ್ಯಾಪ್ತಿಯ ಪರಿಹಾರ ಕ್ರಮಗಳ ಆಶ್ರಯವನ್ನು ಪಡೆಯುತ್ತಿದ್ದಾರೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜಕೀಯ ಉದ್ದೇಶದ ಗುಂಪೊಂದು ನ್ಯಾಯಾಂಗದ ಘನತೆಗೆ ಮಸಿ ಬಳಿಯುವ ಯತ್ನ ನಡೆಸುತ್ತಿದೆ. ಈ ಗುಂಪು ಈಗ ತೀಸ್ತಾ ವಿರುದ್ಧ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ದಾಖಲೆಯಿಂದ ತೆಗೆಯುವಂತೆ ಒತ್ತಡ ಹೇರುತ್ತಿದೆ ಎಂದು ಟೀಕಿಸಿದೆ.
ಸುಪ್ರೀಂ ಕೋರ್ಟ್ ಈಗ ನ್ಯಾಯಾಂಗದ ಪರಿಮಿತಿಯಲ್ಲಿಯೇ ಕ್ರಮಕೈಗೊಂಡಿದೆ. ಈಗಿನ ಕ್ರಮದ ಪರಿಷ್ಕರಣೆಯೂ ನ್ಯಾಯಾಂಗದ ಸಹಜ ಪ್ರಕ್ರಿಯೆಯಲ್ಲೇ ಆಗಬೇಕಿದೆ. ಆದರೆ, ಈ ವರ್ಗ ಕೋರ್ಟ್ ಆದೇಶದಿಂದ ಜನತೆ ವಿಚಲಿತರಾಗಿದ್ದಾರೆ ಎಂಬಂತೆ ಬಿಂಬಿಸುತ್ತಿದೆ ಎಂದು ಹೇಳಿದೆ.
ಜಂಟಿ ಹೇಳಿಕೆಗೆ 13 ಮಂದಿ ನಿವೃತ್ತ ನ್ಯಾಯಮೂರ್ತಿಗಳು, 90 ಮಂದಿ ಮಾಜಿ ಅಧಿಕಾರಿಗಳು, ಸೇನಾ ಪಡೆಗಳ 87 ಮಂದಿ ಮಾಜಿ ಅಧಿಕಾರಿಗಳು ಸಹಿ ಹಾಕಿದ್ದಾರೆ.
ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಆರ್.ಎಸ್.ರಾಥೋಡ್, ಎಸ್.ಎನ್.ಧಿಂಗ್ರಾ, ಎಂ.ಸಿ.ಗರ್ಗ್, ಮಾಜಿ ಐಪಿಎಸ್ ಅಧಿಕಾರಿಗಳಾದ ಸಂಜೀವ್ ತ್ರಿಪಾಠಿ, ಸುಧೀರ್ ಕುಮಾರ್, ಬಿ.ಎಸ್.ಬಸ್ಸಿ, ಕರ್ನಲ್ ಸಿಂಗ್, ಮಾಜಿ ಐಎಎಸ್ ಅಧಿಕಾರಿಗಳಾದ ಜಿ.ಪ್ರಸನ್ನ ಕುಮಾರ್, ಪ್ರೇಮಚಂದ್ರ, ನಿವೃತ್ತ ಲೆಫ್ಟಿನಂಟ್ ಜನರಲ್ ವಿ.ಕೆ.ಚತುರ್ವೇದಿ ಅವರು ಹೇಳಿಕೆಗೆ ಸಹಿ ಹಾಕಿರುವ ಪ್ರಮುಖರಲ್ಲಿ ಸೇರಿದ್ದಾರೆ.