ಮಂಜೇಶ್ವರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ಜಲಾವೃತ್ತವಾಗಿದ್ದು ಮಂಜೇಶ್ವರದ ವಿವಿಧೆಡೆ ಸಮಸ್ಯೆ ತಲೆದೋರಿದೆ.
ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಭಂಡಾರ ಮನೆ ಜಲಾವೃತಗೊಂಡಿದೆ. ಇದರಿಂದಾಗಿ ಭಾರೀ ಸಮಸ್ಯೆ ಸೃಷ್ಟಿಯಾಗಿದೆ.
ಕುಂಜತ್ತೂರು ಹಳೆ ಆರ್ ಟಿ ಒ ಪರಿಸರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆ ನೀರು ತುಂಬಿ ಕೆಸರುಗದ್ದೆಯಾಗಿದೆ. ಇದರ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಫೀಸ್ ಕ್ರಿಯೇಟಿವ್ ಶಾಲಾ ವಾಹನ ಕೆಸರಿನಲ್ಲಿ ಹೂತು ಹೊಂಡಕ್ಕೆ ಮಗುಚಿ ಸಂಭವಿಸಬೇಕಾಗಿದ್ದ ದೊಡ್ಡ ದುರಂತವೊಂದು ತಪ್ಪಿ ಹೋಗಿದೆ.
ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 19ನೇ ವಾರ್ಡ್ ನ ಹಲವು ಮನೆಗಳು ಜಲಾವೃತವಾಗಿದೆ. ಹಲವು ಕುಟುಂಬಗಳನ್ನು ಇಲ್ಲಿಂದ ಸ್ಥಳಾಂತರಿಸಲಾಯಿತು.
6ನೇ ವಾರ್ಡ್ ವ್ಯಾಪ್ತಿಯ ಕರೋಡ, ರಾಗಂ ಜಂಕ್ಷನ್ ಮುಂತಾದ ಕಡೆಗಳಲ್ಲಿ ಸುಮಾರು 15 ಮನೆಗಳು ಜಲಾವೃತಗೊಂಡಿವೆ. ಇಲ್ಲಿಂದ ಮರಿಯಮ್ಮ ಸಂಶುದ್ದೀನ್ ಸೇರಿದಂತೆ 6 ಕುಟುಂಬಗಳನ್ನು ಸ್ಥಳಾಂತರಿಸಲಾಯಿತು. ಇಲ್ಲಿ ವಾರ್ಡ್ ಸದಸ್ಯರಾದ ಅಬೂಬಕರ್ ಸಿದ್ದೀಕ್, ಕುಲ್ಸುಮ್ಮ, ಸಮಾಜದ ಕಾರ್ಯಕರ್ತರಾದ ಅಶ್ರಫ್ ಬಡಾಜೆ, ಅಶ್ರಫ್, ಹಾರೀಶ್, ಮೊಯ್ತು ಮೊದಲಾದವರ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
7ನೇ ವಾರ್ಡ್ ನಲ್ಲಿ ಹಲವೆಡೆ ಆವರಣ ಗೋಡೆಗಳು ಕುಸಿದು ಬಿದ್ದಿವೆ. ಹಲವಡೆ ಸಾಗುವ ದಾರಿಗಳೆಲ್ಲಾ ಜಲಾವೃತಗೊಂಡಿದ್ದು ಜನರು ಹೊರಗಿಳಿಯಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಮಂಜೇಶ್ವರ ಕಾಡಿಯಾರ್ ಪರಿಸರ ಪ್ರದೇಶಗಳೂ ಜಲಾವೃತಗೊಂಡಿವೆ.