ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ಆಯೋಜಿಸಿದ "ಮಯ ಪೊಲಿಮ"(ಕೆಸರುಗದ್ದೆ ಆಟ) ಕಾರ್ಯಕ್ರಮವನ್ನು ಸುರಿವ ಮಳೆಯನ್ನು ಲೆಕ್ಕಿಸದ ನೂರಾರು ಮಹಿಳೆಯರು, ಮಕ್ಕಳು ಗದ್ದೆಗಿಳಿದು ಗ್ರಾಮೀಣ ಆಟೋಟಗಳ ಮೂಲಕ ಯಶಸ್ವಿಯಾಗಿ ಸಂಪನ್ನಗೊಳಿಸಿದರು. ಪೆರ್ಲ ಬಯಲು ಗದ್ದೆಯಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯ ವರೆಗೆ ಆಯೋಜಿಸಿದ ಈ ವೈವಿಧ್ಯಮಯ ಕಾರ್ಯಕ್ರಮವು ಕೃಷಿಪರ ಜಾಗೃತಿ ಮೂಡಿಸಿ ಸಮುದಾಯದಕ್ಕೆ ಹೊಸ ಹುರುಪು ಸೃಷ್ಠಿಸಲು ಕಾರಣವಾಯಿತು. ಜೊತೆಗೆ ಸದಾ ರಾಜಕೀಯ, ಆಡಳಿತಾತ್ಮಕ ವಿಚಾರಗಳಲ್ಲಿ ವ್ಯಸ್ತರಾಗಿ ತಲೆ ಕರೆದುಕೊಳ್ಳುವ ರಾಜಕಾರಣಿಗಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಪೈಕಿ ಸಂಸದರು ಅತ್ಯುತ್ಸಾಹದಿಂದ ಭಾಗವಹಿಸಿ ಎಲ್ಲರಿಂದಲೂ ಹೆಚ್ಚು ಆಸ್ವಾದಿಸಿ ಗಮನಸೆಳೆದರು. ಪಂಚೆಯನ್ನು ಮೇಲೆ ಕಟ್ಟಿ ಎಲ್ಲರಿಂದಲೂ ಮಿಗಿಲೆನಿಸಿ ಹಗ್ಗಜಗ್ಗಾಟದಲ್ಲಿ ತಮ್ಮ ರಾಜಕೀಯ ಹಗ್ಗಜಗ್ಗಾಟದ ಮಧ್ಯೆ ಇದ್ಯಾವ ಮಹಾ ಎಂಬಂತೆ ಬೆಂಬಲ ನೀಡಿದರು.
ಸಮಾರಂಭವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿ ಮಾತನಾಡಿ, "ಪ್ರಾಕೃತಿಕವಾಗಿ ದೊರೆತ ಸಂಪತ್ತು ಕೃಷಿ ಭೂಮಿಯನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕುಟುಂಬಶ್ರೀ ಆಯೋಜಿಸಿದ ಈ ಕಾರ್ಯಕ್ರಮ ಭತ್ತದ ಕೃಷಿಪರ ಜಾಗೃತಿ ಮೂಡಿಸಲ್ಲಿ ಗಮನಾರ್ಹವಾಗಿದೆ" ಎಂದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಭಿ ಹನೀಫ್, ಪಂ.ಸದಸ್ಯಯರಾದ ಶಶಿಧರ, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ, ರಮ್ಲ, ಕುಸುಮಾವತಿ,ಉಷಾ ಕುಮಾರಿ, ಸಿಡಿಎಸ್ ಮೆಂಬರ್ ಸೆಕ್ರಟರಿ ಬಿನೀಶ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಉಪಾಧ್ಯಕ್ಷೆ ಶಶಿಕಲಾ, ಕೆ.ಡಿ.ಸಿ. ಬ್ಯಾಂಕಿನ ಪ್ರಬಂಧಕ ಉಮೇಶ್ ರೈ, ಸಿಡಿಎಸ್ ಸದಸ್ಯೆಯರು, ಕುಟುಂಬಶ್ರೀ, ಬಾಲಸಂಘದ ಸದಸ್ಯರು ಭಾಗವಹಿಸಿದ್ದರು.