ಬದಿಯಡ್ಕ: ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಮಂದಿರ ವಿಷ್ಣುನಗರ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಶಾಂತ ಕುಮಾರ್ ಮುಂಡಿತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಭಾನುವಾರ ಜರಗಿತು. ಸಂಘದ ಸದಸ್ಯ ಜೀವನ್ ಕುಮಾರ್ ಪ್ರಾರ್ಥನೆ ಹಾಡುವ ಮೂಲಕ ಸಭೆಗೆ ಚಾಲನೆ ನೀಡಿದರು. ಬಳಿಕ ಅಗಲಿದ ಸಂಘದ ಸದಸ್ಯರುಗಳಿಗೆ ಗೌರವ ನಮನ ಸಲ್ಲಿಸಲಾಯಿತು.
ಬಳಿಕ ಸಭೆಯಲ್ಲಿ ಸಂಘದ ಹಿರಿಯ ಸದಸ್ಯ ರಾಮ್ ಕುಮಾರ್ ಮುಜುಕುಮೂಲೆ ಪ್ರಾಸ್ತಾವಿಕ ಭಾಷಣಮಾಡಿದರು. ಸಂಘದ ಹಿರಿಯ ಸದಸ್ಯರೂ ಮಾರ್ಗದರ್ಶಕರೂ ಆದ ಚಿದಾನಂದ ಆಳ್ವ ಮಂಜಕೊಟ್ಟಿಗೆ,ಮಾಜಿ ಅಧ್ಯಕ್ಷ ವಿನೋದ್ ಏಳ್ಕಾನ,ಮಂದಿರದ ಪ್ರಧಾನ ಅರ್ಚಕ ಭಾಸ್ಕರ ಪೂಜಾರಿ ಬೀರಿಕುಂಜ ಉಪಸ್ಥಿತರಿದ್ದು ಶುಭ ಹಾರೈಸಿದರು. 2021-22 ನೇ ಸಾಲಿನ ಲೆಕ್ಕಪತ್ರವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್ ಎರ್ಮೆತ್ತೊಟ್ಟಿ ಅವರು ಮಂಡಿಸಿದರು.
ನಂತರ 2022-23 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಎರ್ಮೆತ್ತೊಟ್ಟಿ ಹಾಗೂ ಕೋಶಾಧಿಕಾರಿಯಾಗಿ ಬಾಲಕೃಷ್ಣ ಮಾಸ್ತರ್ ಮುಜುಕುಮೂಲೆ ಮರು ಆಯ್ಕೆಗೊಂಡರು. ಪಾತ್ರೆ ಹಾಗೂ ಪೀಠೋಪಕರಣಗಳ ಜವಾಬ್ದಾರಿಯನ್ನು ಬಾಸ್ಕರ ಮುಂಡಿತ್ತಡ್ಕ ಇವರಿಗೆ ವಹಿಸಿ ಕೊಡಲಾಯಿತು.ಈ ಸಂದರ್ಭದಲ್ಲಿ ಶ್ರೀ ವಿಷ್ಣು ಕಲಾವೃಂದದ ವಾರ್ಷಿಕ ಮಹಾಸಭೆಯ ಕರಪತ್ರವನ್ನು ಹಿರಿಯ ಸದಸ್ಯ ಚಿದಾನಂದ ಆಳ್ವ ಅವರು ಅರ್ಚಕ ಭಾಸ್ಕರ ಪೂಜಾರಿ ಅವರಿಗೆ ನೀಡುವುದರ ಮೂಲಕ ಬಿಡುಗಡೆಗೊಳಿಸಿದರು.
ಭಜನಾ ಸಂಘದ ಜೊತೆಕಾರ್ಯದರ್ಶಿ ಸುನಿಲ್ ಮಾಸ್ತರ್ ಸ್ವಾಗತಿಸಿ, ಕೋಶಾಧಿಕಾರಿ ಬಾಲಕೃಷ್ಣ ಮಾಸ್ತರ್ ವಂದಿಸಿದರು. ಸಂಘದ ಹಿರಿಯ ಕಿರಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.