ನವದೆಹಲಿ: 54 ಸಾಮಾನ್ಯ ರೋಗ ಲಕ್ಷಣಗಳಿಗೆ ಹೊಸ ಪ್ರಮಾಣಿತ ಚಿಕಿತ್ಸೆಯ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಬಿಡುಗಡೆ ಮಾಡಿದೆ.
ವಿಶೇಷ ತಜ್ಞರ ಚಿಕಿತ್ಸೆ ಅಗತ್ಯವಿರುವ 11 ಕಾಯಿಲೆಗಳಿಗೆ, ಸಾರ್ವಜನಿಕ ಆರೋಗ್ಯ ರಕ್ಷಣೆಯ ಎಲ್ಲ ಹಂತಗಳಲ್ಲೂ ಈ ಮಾರ್ಗಸೂಚಿ ಪಾಲನೆ ಅನ್ವಯಿಸಲಿದೆ.
'ಪ್ರಮಾಣಿತ ಚಿಕಿತ್ಸಾ ವಿಧಾನ' ಸಂಪುಟ -3ರಲ್ಲಿ ಔಷಧ ಅಸಂಬದ್ಧ ಬಳಕೆ, ರೋಗ ನಿರ್ಣಯದಲ್ಲಿ ಆಗುವ ತಪ್ಪುಗಳು ಮತ್ತು ಕಳಪೆ ರೆಫರಲ್ ಅಭ್ಯಾಸಗಳಂತಹ ಹಲವು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ.
54 ಸಾಮಾನ್ಯ ಲಕ್ಷಣಗಳ 11 ಕಾಯಿಲೆಗಳಿಗೆ ಸಂಬಂಧಿಸಿದ 'ಪ್ರಮಾಣಿತ ಚಿಕಿತ್ಸಾ ವಿಧಾನ' ಸಂಪುಟ -3ರ ಪುಸ್ತಕ ಮತ್ತು ಮೊಬೈಲ್ ಆಯಪ್ ಅನ್ನು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.ವಿನೋದ್ ಕೆ. ಪಾಲ್ ಮಂಗಳವಾರ ಬಿಡುಗಡೆ ಮಾಡಿದರು ಎಂದು ಎಸಿಎಂಆರ್ ಹೇಳಿಕೆಯಲ್ಲಿ ತಿಳಿಸಿದೆ.
'ಪ್ರಮಾಣಿತ ಚಿಕಿತ್ಸಾ ಕಾರ್ಯವಿಧಾನವನ್ನು (ಎಸ್‌ಟಿಡಬ್ಲ್ಯುಎಸ್) ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಸಂಶೋಧನಾ ಕಾರ್ಯಾಚರಣೆಯ ಕ್ರಮದಲ್ಲಿ ಪರೀಕ್ಷಿಸುವ ಅಗತ್ಯವಿದೆ' ಎಂದು ಡಾ.ವಿನೋದ್ ಕೆ. ಪಾಲ್ ಹೇಳಿದರು.
53 ಸಾಮಾನ್ಯ ಲಕ್ಷಣಗಳ ಕುರಿತ ಸಂಪುಟ- 1 ಅನ್ನು ಐಸಿಎಂಆರ್ 2019ರಲ್ಲಿ ಬಿಡುಗಡೆ ಮಾಡಿತ್ತು. ಕ್ಷಯ ರೋಗದ ಮೇಲೆ ಗಮನ ಕೇಂದ್ರೀಕರಿಸಿ 18 ರೋಗ ಲಕ್ಷಣಗಳ ಚಿಕಿತ್ಸಾ ವಿಧಾನಗಳ ಮಾರ್ಗಸೂಚಿಯ ಸಂಪುಟ-2 ಅನ್ನು ಇದೇ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿತ್ತು.