ಟೆಹರಾನ್: ಭಾರತ ಅದರಲ್ಲಿಯೂ ಕರ್ನಾಟಕದಲ್ಲಿ ಕಳೆದೊಂದು ವರ್ಷದಿಂದ ಹಿಜಾಬ್ ಭಾರಿ ಸುದ್ದಿ ಮಾಡುತ್ತಿರುವ ನಡುವೆಯೇ, ಮುಸ್ಲಿಂರಾಷ್ಟ್ರ ಇರಾನ್ನಲ್ಲಿ ಅತಿ ಕುತೂಹಲ ಎನ್ನುವ ಘಟನೆ ನಡೆದಿದೆ. ಹಿಜಾಬ್ ವಿರುದ್ಧ ಮಹಿಳೆಯರು ಬೀದಿಗಿಳಿದಿದ್ದಾರೆ.
ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಪ್ರವೇಶ ಮಾಡುವುದಿದ್ದರೆ ಹಿಜಾಬ್ ಕಡ್ಡಾಯ ಎಂದು ಈಶಾನ್ಯ ಇರಾನ್‌ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್ ಆದೇಶ ಹೊರಡಿಸಿದ್ದರು. ಈ ಆದೇಶದ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆ ಶುರುವಾಗಿದೆ. ಈ ಆದೇಶ ಮುಸ್ಲಿಂ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಡೆಪ್ಯೂಟಿ ಪ್ರಾಸಿಕ್ಯೂಟರ್ ಆದೇಶದ ವಿರುದ್ಧ ಮೇಯರ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಕೊನೆಗೆ ಅನುಮತಿ ನೀಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರಚಿಸಲಾದ ಇರಾನಿನ ಕಾನೂನಿನ ಪ್ರಕಾರ ಒಂಬತ್ತು ವರ್ಷ ಮೀರಿದ ಎಲ್ಲ ಹುಡುಗಿಯರು/ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ. ಈ ಕಾನೂನು ಉಲ್ಲಂಘನೆ ಮಾಡಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ.
2017-2019ರ ನಡುವಿನ ಅವಧಿಯಲ್ಲಿ ಇರಾನಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಇದೇ ರೀತಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಬಳಿಕ 2019ರಲ್ಲಿ ಸಾರ್ವಜನಿಕವಾಗಿ ಹಿಜಾಬ್ ತೆಗೆದು ವೀಡಿಯೋ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಕೂಡ ಚಾಲ್ತಿಗೆ ತರಲಾಗಿದೆ. ಆದರೆ ಇದಾವುದಕ್ಕೂ ಮಹಿಳೆಯರು ಕ್ಯಾರೇ ಅನ್ನದೇ ಪ್ರತಿಭಟನೆ ನಡೆಸಿದ್ದಾರೆ. ಕಠಿಣ ಶಿಕ್ಷೆಗೇ ಓಪನ್ ಚಾಲೆಂಜ್ ಮಾಡಿದ್ದಾರೆ!
ಇಲ್ಲಿಯ ಸರ್ಕಾರ ನಿನ್ನೆಯ ದಿನವನ್ನು (ಜುಲೈ 12) 'ಹಿಜಾಬ್ ಮತ್ತು ಪರಿಶುದ್ಧತೆ ದಿನ'ವನ್ನಾಗಿ ಆಚರಿಸಲು ಕರೆ ನೀಡಿತ್ತು. ಎಲ್ಲ ಮಹಿಳೆಯರು ನಿಗದಿತ ಸ್ಥಳಗಳಲ್ಲಿ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಇಲ್ಲಿಯ ಮಹಿಳೆಯರನ್ನು ಕೆರಳಿಸಿದೆ. ಈ ಆದೇಶಕ್ಕೆ ಪ್ರತ್ಯುತ್ತರವಾಗಿ ಹಿಜಾಬ್ ಧರಿಸಿ ಬೀದಿಗೆ ಬಂದ ಮಹಿಳೆಯರು ನಡುರಸ್ತೆಯಲ್ಲಿಯೇ ಅದನ್ನು ಕಿತ್ತು ಎಸೆದಿದ್ದಾರೆ, ಹಿಜಾಬ್ ತೆಗೆದು ನೃತ್ಯ ಮಾಡಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 10 ವರ್ಷ ಜೈಲು ಶಿಕ್ಷೆಯ ಕಾನೂನಿನ ಕುರಿತೂ ಚಿಂತಿಸದೇ ಈ ರೀತಿ ಮಾಡಿದ್ದಾರೆ.
#No2hijab ಹ್ಯಾಷ್ಟ್ಯಾಗ್ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ವಿರುದ್ಧ ಬೃಹತ್ ಅಭಿಯಾನವನ್ನೂ ಆರಂಭಿಸಿದ್ದಾರೆ.