ಪಣಜಿ: ಜಲ ಜೀವನ ಮಿಷನ್ ಅಡಿಯಲ್ಲಿ ಏಳು ಕೋಟಿ ಗ್ರಾಮೀಣ ಕುಟುಂಬಗಳಿಗೆ ಕಳೆದ ಮೂರು ವರ್ಷಗಳಲ್ಲಿ ಕೊಳವೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ದೇಶದಲ್ಲಿ ಇದುವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ 10 ಕೋಟಿ ಸಂಪರ್ಕ ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿಳಿಸಿದರು.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ 100ರಷ್ಟು ಕೊಳವೆ ನೀರಿನ ಸಂಪರ್ಕ ಪೂರ್ಣಗೊಂಡಿದ್ದಕ್ಕಾಗಿ ಗೋವಾ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ವಿಡಿಯೊ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.
'10 ಕೋಟಿ ಸಂಪರ್ಕ ಒದಗಿಸಿರುವ ಈ ಮೈಲಿಗಲ್ಲು, ಪರಿಸರ ಸಂರಕ್ಷಣೆ ಮತ್ತು ಜಲ ಸಂರಕ್ಷಣೆ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಗಳನ್ನು ಪ್ರತಿಫಲಿಸುತ್ತದೆ' ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಜಲ ಜೀವನ ಮಿಷನ್ ಘೋಷಣೆ ಮಾಡಿದಾಗ, 16 ಕೋಟಿ ಗ್ರಾಮೀಣ ಕುಟುಂಬಗಳು ನೀರಿಗಾಗಿ ವಿವಿಧ ಮೂಲಗಳ ಮೇಲೆ ಅವಲಂಬಿತರಾಗಿದ್ದವು. ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಕಷ್ಟದಲ್ಲಿರುವುದನ್ನು ಕಂಡು ಸುಮ್ಮನಿರುವುದು ಸಾಧ್ಯವಾಗಲಿಲ್ಲ' ಎಂದರು.
ಮಹಿಳೆಯರಿಗೆ ಹೆಚ್ಚು ಅನುಕೂಲ: 'ಹರ್ ಘರ್ ಜಲ್ ಮಿಷನ್ (ಪ್ರತಿ ಮನೆಗೂ ನೀರಿನ ಸಂಪರ್ಕ) ಯೋಜನೆಯಿಂದ ಮಹಿಳೆಯರಿಗೇ ಹೆಚ್ಚು ಅನುಕೂಲವಾಗಿದೆ. ಮಹಿಳೆಯರೇ ಈ ಯೋಜನೆಯ ಮುಖ್ಯ ಗುರಿ. ಮನೆಗೆ ಬಹು ದೂರದಿಂದ ನೀರು ತರುವ ಅವರ ಸಮಯ ಉಳಿಯುತ್ತಿದೆ. ಜತೆಗೆ ಅಪೌಷ್ಠಿಕತೆಯ ವಿರುದ್ಧ ಹೋರಾಟಕ್ಕೆ ಈ ಯೋಜನೆ ಇನ್ನಷ್ಟು ಶಕ್ತಿ ತುಂಬಿದೆ' ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಭಾಷಣದುದ್ದಕ್ಕೂ ಕಾಂಗ್ರೆಸ್ ಅನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ ಮೋದಿ, 'ವಾಸ್ತವ ಮತ್ತು ಭವಿಷ್ಯದ ಕುರಿತು ಚಿಂತಿಸದವರು ಜಲ ಸಂರಕ್ಷಣೆ ಕುರಿತು ಕೇವಲ ಮಾತನಾಡುತ್ತಿದ್ದರು. ಆದರೆ, ಜಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯಾವ ಕೆಲಸವನ್ನೂ ಮಾಡಲಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ, ಕೇವಲ ಮೂರು ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕ ಒದಗಿಸಲಾಗಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ ಏಳು ಕೋಟಿ ಹೆಚ್ಚುವರಿ ಕೊಳವೆ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ' ಎಂದರು.