ನವದೆಹಲಿ: ಭಾರತ ಸರ್ಕಾರವು ಚೀನಾ ಮೂಲದ ₹12,000 ಮತ್ತು ಅದಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟಕ್ಕೆ ನಿರ್ಬಂಧ ಹೇರಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಮೈಕ್ರೊಮ್ಯಾಕ್ಸ್, ಲಾವಾ, ಕಾರ್ಬನ್ ಮತ್ತು ಇತರ ಸ್ವದೇಶಿ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಕುಂಟುತ್ತಿರುವ ದೇಶೀಯ ಉದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಚೀನೀ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ₹12,000 ($ 150) ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಲು ಭಾರತ ಪ್ರಯತ್ನಿಸುತ್ತಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್‌ನ ಪ್ರಕಾರ, ಸರ್ಕಾರ ಈ ಬಗ್ಗೆ ಯೋಜಿಸುತ್ತಿರುವುದು ನಿಜವಾಗಿದ್ದರೆ, ಭಾರತದಲ್ಲಿ ₹ 12,000 ಮತ್ತು ಅದಕ್ಕಿಂತ ಕಡಿಮೆ ಬೆಲೆಯ ಮೊಬೈಲ್‌ಗಳ ಶೇಕಡ 50 ರಷ್ಟು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಶಿಯೋಮಿ ಮತ್ತು ರಿಯಲ್‌ಮೀಯಂತಹ ಚೀನಾ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ.
ಒಟ್ಟಾರೆಯಾಗಿ, ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಭಾರತದಲ್ಲಿನ ಒಟ್ಟು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇಕಡ 31ರಷ್ಟನ್ನು 12 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಮೊಬೈಲ್‌ಗಳು ಆವರಿಸಿಕೊಂಡಿವೆ. 2018 ರ ಇದೇ ತ್ರೈಮಾಸಿಕದಲ್ಲಿ ಶೇಕಡ 49 ಮಾರುಕಟ್ಟೆಯನ್ನು ಅವು ವ್ಯಾಪಿಸಿದ್ದವು'ಎಂದು ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಐಎಎನ್‌ಎಸ್‌ಗೆ ತಿಳಿಸಿದರು.
Tecno, Infinix ಮತ್ತು Itelನಂತಹ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಚೀನಾದ ಶೆನ್‌ಜೆನ್ ಮೂಲದ ಟ್ರಾನ್ಸಿಷನ್ ಹೋಲ್ಡಿಂಗ್ಸ್ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಯ ಕೈಗೆಟುಕುವ ಫೋನ್ ತಯಾರಿಕಾ ಕಂಪನಿಗಳ ಸಾಲಿನಲ್ಲಿ ಪ್ರಮುಖವಾಗಿದೆ.
ಟ್ರಾನ್ಸಿಷನ್ ಗ್ರೂಪ್ ಬ್ರ್ಯಾಂಡ್‌ಗಳು (itel, Infinix ಮತ್ತು Tecno)2ನೇ ತ್ರೈಮಾಸಿಕದಲ್ಲಿ ಭಾರತದ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಶೇಕಡ 12 ರಷ್ಟು ಪಾಲು ಹೊಂದಿದ್ದವು.
ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಐಟೆಲ್ ₹ 6,000 ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಬೃಹತ್ ಶೇಕಡ 77 ರಷ್ಟು ಪಾಲನ್ನು ಹೊಂದಿದ್ದರೆ, ಟೆಕ್ನೋ ದೇಶದಲ್ಲಿ ₹ 8,000 ಗಳ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಭಾರತವು ಈಗಾಗಲೇ ಚೀನಾದ ಮೊಬೈಲ್ ತಯಾರಕರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದೆ. OPPO, Vivo ಮತ್ತು Xiaomi ಯಂತಹ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳ ಮೇಲೆ ಇತ್ತೀಚೆಗೆ ನಡೆದ ಐಟಿ ದಾಳಿಗಳು ಇದನ್ನು ಸಾಬೀತುಪಡಿಸುತ್ತವೆ.
ಚೀನಾದ ಮೂರು ಮೊಬೈಲ್ ಕಂಪನಿಗಳಾದ OPPO, Vivo India ಮತ್ತು Xiaomi ವಿರುದ್ಧದ ತೆರಿಗೆ ವಂಚನೆ ಆರೋಪದ ಪ್ರಕರಣಗಳನ್ನು ಭಾರತ ಸರ್ಕಾರ ಪರಿಶೀಲಿಸುತ್ತಿದೆ.