ನವದೆಹಲಿ: ದೇಶದಲ್ಲಿ ಎಲ್ಲೇ ಹೋದರೂ ಒಂದಲ್ಲ ಒಂದು ಕಡೆ ಟೋಲ್ ಮೂಲಕ ಹಾದುಹೋಗಬೇಕಾದ್ದು ಅನಿವಾರ್ಯ. ಮಾತ್ರವಲ್ಲ, ಅಂಥ ಪ್ರಯಾಣಕ್ಕೆ ತಕ್ಕ ಟೋಲ್ ಶುಲ್ಕ ಕೊಡಬೇಕಾದ್ದು ಕೂಡ ಅನಿವಾರ್ಯ. ಸೋಷಿಯಲ್ ಮೀಡಿಯಾದಲ್ಲಿ ಈ ಟೋಲ್ ಕುರಿತ ಸುದ್ದಿಯೊಂದು ಹರಿದಾಡುತ್ತಿದ್ದು, ಒಂದಷ್ಟು ಗೊಂದಲ ಕೂಡ ಉಂಟಾಗಲಾರಂಭಿಸಿದೆ.
ಅದರಲ್ಲೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹೆಸರಿನಲ್ಲೇ ವದಂತಿಯೊಂದನ್ನು ಹರಿಬಿಟ್ಟು ಗೊಂದಲ ಉಂಟು ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಸತ್ಯಪರಿಶೀಲನೆ ನಡೆಸಿ ಸ್ಪಷ್ಟನೆಯನ್ನೂ ನೀಡಿದೆ.
ಟೋಲ್ನಲ್ಲಿ 12 ಗಂಟೆಯೊಳಗೆ ವಾಪಸ್ ಬರುವುದಿದ್ದರೆ ಆ ವಾಪಸ್ ಪ್ರಯಾಣಕ್ಕೆ ಟೋಲ್ ಪಾವತಿಸುವಂತಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಆದೇಶ ಹೊರಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು, ಸರ್ಕಾರ ಇಂಥ ಯಾವುದೇ ಆದೇಶ ಮಾಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.