ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರು ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್ (71) ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಧನಖರ್ ಅವರು ಹಿಂದಿಯಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಿರ್ಗಮಿತ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಭಾರತದ ಉಪ ರಾಷ್ಟ್ರಪತಿಯು ರಾಜ್ಯಸಭೆ ಸಭಾಧ್ಯಕ್ಷರಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
ಉಪ ರಾಷ್ಟ್ರಪತಿ ಹುದ್ದೆಯು ದೇಶದಲ್ಲಿ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಎನಿಸಿಕೊಂಡಿದೆ. ಒಂದು ವೇಳೆ ರಾಷ್ಟ್ರಪತಿಯ ಸ್ಥಾನ ತೆರವಾದರೆ ಹೊಸಬರ ಆಯ್ಕೆ ಆಗುವವರೆಗೆ ತಾತ್ಕಾಲಿಕವಾಗಿ ಆ ಸ್ಥಾನವನ್ನು ಉಪ ರಾಷ್ಟ್ರಪತಿಗಳು ನಿಭಾಯಿಸುತ್ತಾರೆ.
ಐದು ವರ್ಷಗಳ ಅವಧಿಗೆ ಉಪ ರಾಷ್ಟ್ರಪತಿ ಸೇವೆ ಸಲ್ಲಿಸುತ್ತಾರಾದರೂ, ಅದರ ನಂತರದ ಆಯ್ಕೆ ವಿಳಂಬವಾದರೆ ಅಲ್ಲಿಯ ವರೆಗೆ ಮುಂದುವರಿಯಲು ಅವಕಾಶವಿದೆ.
ಐದು ವರ್ಷಗಳ ಅವಧಿಗೆ ಉಪ ರಾಷ್ಟ್ರಪತಿ ಸೇವೆ ಸಲ್ಲಿಸುತ್ತಾರಾದರೂ, ಅದರ ನಂತರದ ಆಯ್ಕೆ ವಿಳಂಬವಾದರೆ ಅಲ್ಲಿಯ ವರೆಗೆ ಮುಂದುವರಿಯಲು ಅವಕಾಶವಿದೆ.
ಧನಕರ್ ಅವರು ಹುಟ್ಟಿದ್ದು 1951ರಲ್ಲಿ. ಜೈಪುರದ ಮಹಾರಾಜ ಕಾಲೇಜಿನಿಂದ ಭೌತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಜೈಪುರ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಅವರ ಪತ್ನಿಯ ಹೆಸರು ಸುದೇಶ್ ಧನಕರ್ ಮತ್ತು ಅವರಿಗೆ ಒಬ್ಬಳು ಮಗಳಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಧನಕರ್ ಅವರು 1989ರಲ್ಲಿ ರಾಜಕೀಯಕ್ಕೆ ಬಂದರು. ರಾಜಸ್ಥಾನದ ಝುಂಝುನು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1990ರಲ್ಲಿ ಕೇಂದ್ರ ಸಚಿವರೂ ಆದರು. ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.
1993ರಿಂದ 1998ರವರೆಗೆ ರಾಜಸ್ಥಾನ ವಿಧಾನಸಭೆಯ ಸದಸ್ಯರೂ ಆಗಿದ್ದರು. ಜನತಾ ದಳದಿಂದ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಂತರ ಕಾಂಗ್ರೆಸ್ ಸೇರಿದ್ದರು. 2003ರಲ್ಲಿ ಅವರು ಬಿಜೆಪಿ ಸೇರಿದರು.
2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅವರನ್ನು ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗಿನ ತಿಕ್ಕಾಟದಿಂದಲೇ ಆಗಾಗ ಸುದ್ದಿಯಾಗುತ್ತಿದ್ದರು.
ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಚುನಾವಣೆಯಲ್ಲಿ ಮಣಿಸಿದ್ದರು.