ಲಕ್ನೋ: ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಕ್ಯಾಡ್ಬರಿ ಕಂಪನಿಯ ಚಾಕಲೇಟ್ ಇದ್ದ ಸುಮಾರು 150 ಬಾಕ್ಸ್ ಗಳನ್ನು ಕದ್ದಿದ್ದಾರೆ. ಸುಮಾರು 150 ಬಾಕ್ಸ್‌ಗಳಲ್ಲಿ ತುಂಬಿದ್ದ ಬರೋಬ್ಬರಿ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್ ಬಾರ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಈ ಗೋಡೌನ್ ಹಿಂದೆ ಕ್ಯಾಡ್ಬರಿ ವಿತರಕರಾದ ರಾಜೇಂದ್ರ ಸಿಂಗ್ ಸಿಧು ಎಂಬವರ ಮನೆಯಾಗಿತ್ತು. ಅವರು ಇತ್ತೀಚೆಗೆ ಗೋಮತಿ ನಗರದ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲಿ ಚಾಕೊಲೇಟ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಸದ್ಯ ಚಾಕೊಲೇಟ್ ಕಳ್ಳತನವಾದ ಬಗ್ಗೆ ಸಿಧು ಅವರು ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ನಾವು ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ರಾಜೇಂದ್ರ ಸಿಂಗ್ ಸಿಧು ಹೇಳಿದ್ದಾರೆ. ಚಿನ್ಹಾಟ್‌ನಲ್ಲಿದ್ದ ನೆರೆಹೊರೆಯವರು ಕರೆ ಮಾಡಿ ತಮ್ಮ ಮನೆಯ ಬಾಗಿಲು ಮುರಿದು ಬಿದ್ದಿರುವುದನ್ನು ತಿಳಿಸಿದರು ಎಂದು ರಾಜೇಂದ್ರ ಸಿಂಗ್ ಸಿಧು ಹೇಳಿದ್ದಾರೆ.
ಚಾಕೋಲೆಟ್ ಸಂಗ್ರಹಿಸಿದ್ದ ಹಳೆ ಮನೆಗೆ ಬಂದು ನೋಡಿದಾಗ, ಅದು ಖಾಲಿ ಬಿದ್ದಿತ್ತು. ಚಾಕೊಲೇಟ್ ಜತೆಗೆ ಅಲ್ಲಿದ್ದ ಭದ್ರತಾ ಕ್ಯಾಮರಾಗಳನ್ನು ಸಹ ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ.
ಈ ಬಗ್ಗೆ ನೆರೆಹೊರೆಯವರಲ್ಲಿ ಒಬ್ಬರಿಗೆ ರಾತ್ರಿ ವೇಳೆ ಪಿಕ್ ಅಪ್ ಟ್ರಕ್ ವಾಹನದ ಸದ್ದು ಕೇಳಿದೆಯಂತೆ. ಅದರ ಆಧಾರದ ಮೇಲೆ ಕಳ್ಳರು ಕದ್ದ ಚಾಕೊಲೇಟ್‌ಗಳನ್ನು ಸಾಗಿಸಲು ಟ್ರಕ್ ಅನ್ನು ಬಳಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದೆರಡು ದಿನಗಳ ಹಿಂದೆಯೇ ದಾಸ್ತಾನು ಬಂದಿದ್ದು, ನಗರದ ಚಿಲ್ಲರೆ ವ್ಯಾಪಾರಿಗಳಿಗೆ ವಿತರಿಸಲು ಉದ್ದೇಶಿಸಲಾಗಿತ್ತು ಎಂದು ವಿವರಿಸಿದ್ದಾರೆ.