ಕೋಲ್ಕತಾ: ಪುರಸಭೆಯ ತ್ಯಾಜ್ಯ ಎಸೆಯುವ ಮೈದಾನದಲ್ಲಿ ಕನಿಷ್ಠ 18 ಭ್ರೂಣಗಳು ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ. ಕೋಲ್ಕತಾದಿಂದ ಸುಮಾರು 40 ಕಿಮೀ ದೂರದಲ್ಲಿರುವ ಪುರಸಭೆಯ ತ್ಯಾಜ್ಯ ಎಸೆಯುವ ಉಲುಬೇರಿಯಾದ ಡಂಪಿಂಗ್ ಯಾರ್ಡ್‌ನಲ್ಲಿ ಭ್ರೂಣಗಳು ಪತ್ತೆಯಾಗಿವೆ.
ಪುರಸಭೆಯ ತ್ಯಾಜ್ಯದ ಮಧ್ಯೆ ಚಿಂದಿ ಆಯುವವರು ಇದನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಡಂಪಿಂಗ್ ಗ್ರೌಂಡ್‌ನ 2 ಕಿಮೀ ವ್ಯಾಪ್ತಿಯಲ್ಲಿ ಕನಿಷ್ಠ 30 ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳು ಇದ್ದು, ಇವರಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಪೌರಕಾರ್ಮಿಕರು ಹಾಗೂ ಆರೋಗ್ಯಾಧಿಕಾರಿಗಳೂ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಐದು ಬಾಕ್ಸ್‌ಗಳಲ್ಲಿ ಭ್ರೂಣಗಳನ್ನು ತುಂಬಿ ಹರಿಯುವ ಚರಂಡಿಗೆ ಎಸೆಯಲಾಗಿದೆ. ಪುರಾವೆಗಳ ಆಧಾರದ ಮೇಲೆ ಇದು ಲಿಂಗ ಪತ್ತೆ ಮತ್ತು ಹೆಣ್ಣು ಶಿಶುಹತ್ಯೆಯ ಪ್ರಕರಣವೆಂದು ತೋರುತ್ತದೆ. ಎಲ್ಲಾ ಭ್ರೂಣಗಳು ಐದು ತಿಂಗಳಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಮೂಲಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭ್ರೂಣಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಗಂಭೀರ ವಿಷಯವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದೇ ಆಸ್ಪತ್ರೆ ಅಥವಾ ನರ್ಸಿಂಗ್ ಹೋಮ್‌ನಲ್ಲಿ ದಂಧೆ ನಡೆಯುತ್ತಿದೆಯೇ ಎಂಬುದನ್ನು ಕಂಡುಹಿಡಿಯಬೇಕು ಎಂದು ಹೌರಾದ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ನಿತೈಚಂದ್ರ ಮೊಂಡೋಲ್ ಪ್ರತಿಕ್ರಿಯೆ ನೀಡಿದ್ದಾರೆ.