ನವದೆಹಲಿ: '18 ವರ್ಷ ಮೇಲ್ಪಟ್ಟವರ ಪೈಕಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ ಎರಡು ಡೋಸ್‌ಗಳನ್ನೂ ಪಡೆದುಕೊಂಡಿರುವವರಿಗೆ ಮುನ್ನೆಚ್ಚರಿಕೆ ಡೋಸ್ ಆಗಿ ಕೋರ್ಬೆವ್ಯಾಕ್ಸ್ ನೀಡಲು ಚಿಂತಿಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ಶೀಘ್ರವೇ ಇದಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ' ಎಂದು ಮೂಲಗಳು ಮಂಗಳವಾರ ತಿಳಿಸಿವೆ.
'ಕೋವಿಡ್-19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು (ಎನ್‌ಟಿಎಜಿಐ) ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್ ಆಗಿ ನೀಡಲು ಶಿಫಾರಸು ಮಾಡಿದ್ದು, ಇದರ ಆಧಾರದಲ್ಲಿ ಆರೋಗ್ಯ ಸಚಿವಾಲಯ ಅನುಮತಿ ನೀಡುವ ಸಾಧ್ಯತೆ ಇದೆ' ಎಂದು ಮೂಲಗಳು ಹೇಳಿವೆ.
ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಕೋವಿಡ್-19 ರೋಗ ನಿರೋಧಕ ಕಾರ್ಯಕ್ರಮದಡಿ ಸದ್ಯ 12 ರಿಂದ 14 ವರ್ಷದ ಮಕ್ಕಳಿಗೆ ಇದನ್ನು ನೀಡಲಾಗುತ್ತಿದೆ.
'ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಪಡೆದಿದ್ದವರಿಗೆ ಪ್ರಾಯೋಗಿಕವಾಗಿ ಕೋರ್ಬೆವ್ಯಾಕ್ಸ್ ಲಸಿಕೆ ನೀಡಿದ್ದಾಗ ಅವರ ದೇಹದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಪ್ರತಿಕಾಯಗಳು ವೃದ್ಧಿಯಾಗಿದ್ದನ್ನು ಕೋವಿಡ್-19 ಕಾರ್ಯಪಡೆ ಗಮನಿಸಿತ್ತು. ಈ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್ ಆಗಿ ನೀಡಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಜೂನ್ 4ರಂದೇ ಒಪ್ಪಿಗೆ ನೀಡಿತ್ತು' ಎಂದೂ ಮೂಲಗಳು ಮಾಹಿತಿ ನೀಡಿವೆ.