ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತಗಳು,ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟದ ಘಟನೆಗಳಲ್ಲಿ ಒಂದೇ ಕುಟುಂಬದ ಎಂಟು ಜನರು ಸೇರಿದಂತೆ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಇಲಾಖೆಯು ಶನಿವಾರ ತಿಳಿಸಿದೆ.
ಮಂಡಿ,ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಗರಿಷ್ಠ ಹಾನಿಯು ಸಂಭವಿಸಿದ್ದು,ಈವರೆಗೆ ರಾಜ್ಯದಲ್ಲಿ ಹವಾಮಾನ ಸಂಬಂಧಿತ 36 ಘಟನೆಗಳು ವರದಿಯಾಗಿವೆ ಎಂದು ಅದು ಹೇಳಿದೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 743 ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿದೆ.
ಮಂಡಿ ಜಿಲ್ಲೆಯೊಂದರಲ್ಲೇ 13 ಜನರು ಮೃತಪಟ್ಟಿದ್ದು,ಐವರು ನಾಪತ್ತೆಯಾಗಿದ್ದಾರೆ.
ಗೋಹರ್ ಡೆವಲಪ್ಮೆಂಟ್ ಬ್ಲಾಕ್ನ ಕಷಾನ್ ಗ್ರಾಮದಲ್ಲಿ ಭೂಕುಸಿತದಿಂದ ನೆಲಸಮಗೊಂಡಿದ್ದ
ಮನೆಯ ಅವಶೇಷಗಳಡಿಯಿಂದ ಎಂಟು ಜನರ ಶವಗಳನ್ನು ಎನ್ಡಿಆರ್‌ಎಫ್ ತಂಡವು ನಾಲ್ಕು ಗಂಟೆಗಳ
ಶೋಧ ಕಾರ್ಯಾಚರಣೆಯ ಬಳಿಕ ಹೊರಕ್ಕೆ ತೆಗೆದಿದೆ.