ಲಾಡರ್ ಹಿಲ್: ಯುನೈಟೆಡ್ ಸ್ಟೇಟ್ಸ್ ನ ಫ್ಲೋರಿಡಾದ ಲಾಡರ್ ಹಿಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ 59 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 33, ಸೂರ್ಯ ಕುಮಾರ್ ಯಾದವ್ 24, ದೀಪಕ್ ಹೂಡಾ 21, ರಿಷಭ್ ಪಂತ್ 44, ಸಂಜು ಸ್ಯಾಮ್ಸನ್ 30, ದಿನೇಶ್ ಕಾರ್ತಿಕ್ 6, ಅಕ್ಸರ್ ಪಟೇಲ್ 20 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್, ಒಬೆಡ್ ಮೆಕ್ಕೊಯ್ ತಲಾ ಎರಡು ವಿಕೆಟ್ ಪಡೆದರೆ, ಹೊಸೈನ್ ಒಂದು ವಿಕೆಟ್ ಕಬಳಿಸಿದರು.
ಭಾರತ ನೀಡಿದ 191 ರನ್ ಗಳ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ 19. 1 ಓವರ್ ಗಳಲ್ಲಿ ಆಲೌಟ್ ಆಗುವುದರೊಂದಿಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಟೀಂ ಇಂಡಿಯಾ 59 ರನ್ ಗಳಿಂದ ಭರ್ಜರಿ ಜಯಭೇರಿ ಬಾರಿಸಿತು. ಭಾರತ ಪರ ಅವೇಶ್ ಖಾನ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರು.