ಹೈದರಾಬಾದ್:ಗ್ರಾಹಕ ಉತ್ಪನ್ನಗಳ ಮಳಿಗೆ ಐಕಿಯಾ (IKEA) ಇಂಡಿಯಾ ಇದರ ಹೈದರಾಬಾದ್ ಶೋರೂಮಿಗೆ ತೆರಳಿದ್ದ ವೇಳೆ ಸಂಸ್ಥೆಯ ಲಾಂಛನವಿದ್ದ ಕ್ಯಾರಿ ಬ್ಯಾಗ್ ಖರೀದಿಸುವಂತೆ ಬಲವಂತಪಡಿಸಿದ್ದನ್ನು ವಿರೋಧಿಸಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದ ಸಿಕಂದರಾಬಾದಿನ 35 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರಿಗೆ ಹಣ ವಾಪಸ್ ನೀಡುವಂತೆ ಹಾಗೂ ಪರಿಹಾರ ನೀಡುವಂತೆ ತೆಲಂಗಾಣದ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಕೆವಿನ್ ಸುಕೀರ್ತಿ ಎಂಬವರು ತಮಗೆ ರೂ. 20 ದರದ ಕ್ಯಾರಿ ಬ್ಯಾಗ್ ಖರೀದಿಸುವಂತೆ ಮಾಡಲಾಯಿತು ಎಂದು ದೂರಿದ್ದರು. ಇತ್ತಂಡಗಳ ವಾದ ಆಲಿಸಿದ ರಂಗಾರೆಡ್ಡಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಕ್ಯಾರಿ ಬ್ಯಾಗ್‍ಗಳಿಗೆ ಗ್ರಾಹಕರಿಂದ ಹಣ ಸಂಗ್ರಹಿಸದಂತೆ ಕಂಪೆನಿಗೆ ಸೂಚಿಸಿತಲ್ಲದೆ ಗ್ರಾಹಕನಿಂದ ಪಡೆದ ರೂ. 20 ಹಾಗೂ ಪರಹಾರವಾಗಿ ರೂ. 1000 ಜೊತೆಗೆ ಗ್ರಾಹಕ ರಕ್ಷಣಾ ಕಾಯಿದೆಯ ಕುರಿತು ಜಾಗೃತಿ ಕೆಲಸಕ್ಕಾಗಿ ಗ್ರಾಹಕ ಕಾನೂನು ಸಹಾಯಕ್ಕಾಗಿ ರೂ. 5000 ಠೇವಣಿಯಿಡುವಂತೆ ಆದೇಶಿಸಿದೆ.
ತಾವು ಸಂಸ್ಥೆಯ ಶೋರೂಮಿಗೆ ಜನವರಿ 26, 2020 ರಂದು ಹೋಗಿ ರೂ. 1071 ಬೆಲೆಯ ವಸ್ತುಗಳನ್ನು ಖರೀದಿಸಿದ್ದಾಗಿ, ಬಿಲ್ಲಿಂಗ್ ಕೌಂಟರಿನಲ್ಲಿದ್ದ ವ್ಯಕ್ತಿ ಕ್ಯಾರಿ ಬ್ಯಾಗ್(Carry Bag) ಬೇಕೇ ಎಂದು ಕೇಳಿದಾಗ ಹೌದೆಂದಿದ್ದಾಗಿ ಹಾಗೂ ನಂತರ ಬಿಲ್ಲಿನಲ್ಲಿ ಕ್ಯಾರಿ ಬ್ಯಾಗ್‍ಗೆ ರೂ. 20 ದರ ವಿಧಿಸಿದ್ದನ್ನು ನೋಡಿದ್ದಾಗಿ ಗ್ರಾಹಕರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಗ್ರಾಹಕರಿಗೆ ಪೂರ್ವಾನುಮತಿಯೊಂದಿಗೆ ಬ್ಯಾಗ್‍ಗಳಿಗೆ ರೂ. 20 ದರ ವಿಧಿಸಲಾಗುತ್ತದೆ ಹಾಗೂ ಬ್ಯಾಗ್‍ಗಳಿಗೆ ದರ ವಿಧಿಸಲಾಗುತ್ತಿದೆ ಎಂದು ತನಗೆ ಮಾಹಿತಿ ನೀಡಿಲ್ಲ ಎಂಬ ದೂರುದಾರರ ಆರೋಪವನ್ನು ಕಂಪೆನಿ ತಿರಸ್ಕರಿಸಿದೆ. ತಾನು ಕ್ಯಾರಿ ಬ್ಯಾಗ್‍ಗಳ ಕುರಿತು ತನ್ನ ವೆಬ್‍ಸೈಟ್‍ನಲ್ಲಿ(Website) ಹಾಗೂ ಪ್ರವೇಶ ದ್ವಾರ ಮತ್ತು ಬಿಲ್ಲಿಂಗ್ ಕೌಂಟರ್‍ನಲ್ಲೂ(Billing Counter) ಮಾಹಿತಿ ನೀಡಿರುವ ಬೋರ್ಡ್‍ಗಳನ್ನು ಅಳವಡಿಸಿದ್ದಾಗಿ ಕಂಪೆನಿ ಹೇಳಿದೆ.
ಆದರೆ ಇಂತಹ ಕ್ಯಾರಿ ಬ್ಯಾಗ್‍ಗಳಿಗೆ, ಪ್ರಮುಖವಾಗಿ ಕಂಪೆನಿಯ ಲಾಂಛನವಿರುವ ಕ್ಯಾರಿ ಬ್ಯಾಗ್‍ಗಳಿಗೆ ದರ ವಿಧಿಸುವ ಹಾಗಿಲ್ಲ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.