ನವದೆಹಲಿ: ಟೆಲಿಕಾಂ ಕಂಪನಿಗಳ ವಿರುದ್ಧ 2021-22ರ ಅವಧಿಯಲ್ಲಿ ಮೊಬೈಲ್ ಸೇವೆಗಳಿಗೆ ಸಂಬಂಧಿಸಿದ ಸುಮಾರು 5 ಕೋಟಿಗೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಚೌಹಾಣ್, ವಿವಿಧ ಟೆಲಿಕಾಂ ಕಂಪನಿಗಳ ವಿರುದ್ಧ ದಾಖಲಾಗಿರುವ ದೂರುಗಳ ಅಂಕಿ-ಅಂಶ ನೀಡಿದ್ದಾರೆ. ಅದರಂತೆ ಏರ್‌ಟೆಲ್ ವಿರುದ್ಧ 2,99,68,519, ವೊಡಾಫೋನ್-ಐಡಿಯಾ ವಿರುದ್ಧ 2,17,85,460 ಹಾಗೂ ರಿಲಯನ್ಸ್ ಜಿಯೊ ವಿರುದ್ಧ 25.8 ಲಕ್ಷ ದೂರುಗಳು ಕೇಳಿ ಬಂದಿವೆ.
2021-22ರ ಅವಧಿಯಲ್ಲಿ ಗ್ರಾಹಕರು ಒಟ್ಟಾರೆ 5.5 ಕೋಟಿಗೂ ಅಧಿಕ ದೂರುಗಳನ್ನು ಹೆಲ್ಪ್‌ಲೈನ್ ಸಂಖ್ಯೆಗಳ ಮೂಲಕ ನೋಂದಾಯಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಹಾಗೂ ಮಹಾನಗರ ಟೆಲಿಫೋನ್ ನಿಗಮದ ವಿರುದ್ಧ ಕ್ರಮವಾಗಿ 8.8 ಲಕ್ಷ ಮತ್ತು 48,170 ದೂರುಗಳಿವೆ.
ದೂರು ಕೇಂದ್ರದ ಮೂಲಕ ಗ್ರಾಹಕರಿಂದ ಸ್ವೀಕರಿಸಿದ ದೂರುಗಳನ್ನು ಸಂಬಂಧಪಟ್ಟ ಕಂಪನಿಗಳು ಪರಿಹರಿಸಲಿವೆ. ಪರಿಹಾರ ಸಿಗದಿದ್ದರೆ, ದೂರುದಾರರು ಸಂವಹನ ಇಲಾಖೆಯ ಸಾರ್ವಜನಿಕ ಕುಂದುಕೊರತೆ ವಿಭಾಗವನ್ನು ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.