ನವದೆಹಲಿ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್ ಸಕ್ಷಮಗೊಳಿಸಲು ಇದಾಗಲೇ ಸರ್ಕಾರ 1.64 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ. ಹಲವು ಶಾಖೆಗಳಲ್ಲಿನ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಖಾಸಗಿ ಟೆಲಿಕಾಂ ಕಂಪೆನಿಗಳ ಸಿಬ್ಬಂದಿ ಗ್ರಾಹಕರನ್ನು ವಿಚಾರಿಸಿಕೊಳ್ಳುವಂತೆ, ಬಿಎಸ್‌ಎನ್‌ಎಲ್ ಸಿಬ್ಬಂದಿ ನೋಡಿಕೊಳ್ಳುತ್ತಿಲ್ಲ, ಏನಾದರೂ ಕೆಲಸ ಮಾಡಿಸಿಕೊಳ್ಳಲು ಕಚೇರಿಗೆ ಹೋದರೆ, ಅತ್ಯಂತ ನಿರ್ಲಕ್ಷ್ಯದಿಂದ ವರ್ತಿಸುತ್ತಾರೆ.
ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ರೆಸ್ಪಾನ್ಸ್ ಮಾಡುವುದಿಲ್ಲ ಎಂಬುದು ಸೇರಿದಂತೆ ಬಿಎಸ್ಎಲ್ಎಲ್ ಸಿಬ್ಬಂದಿಯ ಮೇಲೆ ಇದಾಗಲೇ ಗ್ರಾಹಕರು ಹಲವಾರು ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಗ್ರಾಹಕರು ತಾವು ಬಿಎಸ್‌ಎನ್‌ಎಲ್ ಸಂಪರ್ಕವನ್ನು ಕಡಿತಗೊಳಿಸಿದ್ದೇವೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಸಿಬ್ಬಂದಿಯ ಕಾರ್ಯವೈಖರಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಇದೀಗ ಖುದ್ದು ಟೆಲಿಕಾಂ ಸಚಿವರೇ ಬಿಎಸ್‌ಎನ್‌ಎಲ್ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರ 1.64 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಎಸ್‌ಎನ್‌ಎಲ್ ಸಿಬ್ಬಂದಿಗೆ 24 ತಿಂಗಳ ಗಡುವು ನೀಡಿರುವ ಸಚಿವರು, ಈ ಅವಧಿಯಲ್ಲಿ ನಿಮ್ಮಿಂದ ಉತ್ತಮ ಕಾರ್ಯವನ್ನು ಸರ್ಕಾರ ಬಯಸುತ್ತಿದೆ. ಕೆಲಸ ಮಾಡಲು ಮನಸ್ಸು ಇಲ್ಲದಿದ್ದರೆ ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದು ಮನೆಗೆ ಹೋಗುತ್ತಿರಿ ಅಷ್ಟೇ. ವಿಆರ್‌ಎಸ್ ತೆಗೆದುಕೊಳ್ಳಲು ಹಿಂಜರಿಯುವವರಿಗೆ 56(ಜೆ) ನಿಯಮ ಪ್ರಯೋಗಿಸಿ ಕಡ್ಡಾಯ ನಿವೃತ್ತಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಕೆಲಸ ಮಾಡಿ ಇಲ್ಲವೇ ತೊಲಗಿ (perform or perish) ಎಂದು ತೀಕ್ಷ್ಣವಾಗಿ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ ನಿಮಗೆ ಎಷ್ಟೇ ಸಹಕಾರ ನೀಡುತ್ತಿದ್ದರೂ ಹಲವಾರು ದೂರುಗಳು ನಮಗೆ ಬರುತ್ತಿವೆ, ಆದ್ದರಿಂದ ಈ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಕಚೇರಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇರಬೇಕು. ತಕ್ಷಣ ಗ್ರಾಹಕರ ಕರೆಗಳನ್ನು ಸ್ವೀಕರಿಸಬೇಕು. ಖಾಸಗಿ ಟೆಲಿಕಾಂ ಕಂಪನಿಗಳಿಗಿಂತ 100 ಪಟ್ಟು ಉತ್ತಮ ಸೇವೆಯನ್ನು ನೀಡಬೇಕು ಎಂದು ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪುನರುಜ್ಜೀವನದ ಪ್ಯಾಕೇಜ್ ನೀಡಿದೆ, ಇಂಥದ್ದೊಂದು ಅಪಾಯವನ್ನು ಯಾವುದೇ ಸರ್ಕಾರ ತೆಗೆದುಕೊಳ್ಳುವುದಿಲ್ಲ. ನಾವು ಅಂತಹ ದೊಡ್ಡ ಪ್ಯಾಕೇಜ್ ನೀಡಿರುವಾಗ ಹಣಕಾಸು, ಆದಾಯ, ಬ್ಯಾಲೆನ್ಸ್ ಶೀಟ್ ಅಂಶಗಳನ್ನು ಪರಿಗಣಿಸಿದ್ದೇವೆ. ಈ ಕಾರಣದಿಂದ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದ ಸಚಿವರು, ಕಳಪೆ ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ಇದಾಗಲೇ ಭಾರತೀಯ ರೈಲ್ವೆಯ ಸುಮಾರು 70 ಅಧಿಕಾರಿಗಳಿಗೆ ಕೆಲಸ ತೊರೆಯುವಂತೆ ಸೂಚಿಸಲಾಗಿದೆ ಎಂದೂ ಹೇಳಿದರು.