ನವದೆಹಲಿ:ಭಾರತದಲ್ಲಿ 2021ರಲ್ಲಿ ಆತ್ಮಹತ್ಯೆಗೈದ 1,64,033 ಮಂದಿಯಲ್ಲಿ ಪ್ರತಿ ನಾಲ್ಕು ಮಂದಿಯಲ್ಲಿ ಒಬ್ಬರು ದಿನಗೂಲಿ ಕಾರ್ಮಿಕರಾಗಿದ್ದರು(Daily wagers) ಎಂದು ನ್ಯಾಷನಲ್ ಕ್ರೈಂ ರೆಕಾಡ್ರ್ಸ್ ಬ್ಯುರೋ(NCRB) ಅಂಕಿಅಂಶಗಳು ತಿಳಿಸಿವೆ.
ಎನ್‍ಸಿ ಆರ್ ಬಿ ಇದರ "ಭಾರತದಲ್ಲಿನ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು" ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ ಎಂದು indianexpress ವರದಿ ಮಾಡಿದೆ.
2021 ರಲ್ಲಿ ಆತ್ಮಹತ್ಯೆಗೈದವರ ಪೈಕಿ ಶೇ 25.6ರಷ್ಟು ಅಂದರೆ 42,004 ಮಂದಿ ದಿನಗೂಲಿ ಕಾರ್ಮಿಕರಾಗಿದ್ದರು. 2020 ರಲ್ಲಿ ಕೂಡ ಆತ್ಮಹತ್ಯೆಗೈದ ಒಟ್ಟು 1,53,052 ಮಂದಿಯಲ್ಲಿ 37,666 ಮಂದಿ (ಶೇ 24.6) ದಿನಗೂಲಿ ಕಾರ್ಮಿಕರಾಗಿದ್ದರು ಎಂಬುದು ಎನ್‍ಸಿ ಆರ್ ಬಿ ಅಂಕಿಅಂಶಗಳಿಂದ ತಿಳಿದು ಬರುತ್ತದೆ.
ರಾಷ್ಟ್ರಮಟ್ಟದಲ್ಲಿ 2020ಗೆ ಹೋಲಿಸಿದಾಗ 2021 ರಲ್ಲಿ ಆತ್ಮಹತ್ಯೆಗೈದವರ ಸಂಖ್ಯೆ ಶೇ 7.17 ರಷ್ಟು ಏರಿಕೆಯಾಗಿತ್ತು. ಅದೇ ಸಮಯ ಈ ಅವಧಿಯಲ್ಲಿ ಆತ್ಮಹತ್ಯೆಗೈದ ದಿನಗೂಲಿ ಕಾರ್ಮಿಕರ ಸಂಖ್ಯೆ ಶೇ 11.52ರಷ್ಟು ಏರಿಕೆಯಾಗಿತ್ತು.
ಆತ್ಮಹತ್ಯೆ ಪ್ರಕರಣಗಳಲ್ಲಿ ಎನ್‍ಸಿಆರ್ ಒಟ್ಟು ಒಂಬತ್ತು ವಿಭಾಗಗಳನ್ನು ಹೊಂದಿದ್ದು ಗರಿಷ್ಠ 16.73 ಪ್ರಕರಣಗಳು ಸ್ವಉದ್ಯೋಗಿಗಳ ಆತ್ಮಹತ್ಯೆಯಾಗಿದೆ. 2021ರಲ್ಲಿ 20,231 ಸ್ವಉದ್ಯೋಗಿಗಳು ಆತ್ಮಹತ್ಯೆಗೈದಿದ್ದರೆ 2020 ರಲ್ಲಿ ಈ ಸಂಖ್ಯೆ 17,332 ಆಗಿತ್ತು.
2021ರಲ್ಲಿ ಆತ್ಮಹತ್ಯೆಗೈದವರ ಪೈಕಿ ನಿರುದ್ಯೋಗಿಗಳ ಸಂಖ್ಯೆ 13,714(ಶೇ 12.38) ಆಗಿದ್ದರೆ 2020 ರಲ್ಲಿ ಈ ಸಂಖ್ಯೆ 15,662 ಆಗಿತ್ತು.