ನವದೆಹಲಿ: 'ದೇಶದಲ್ಲಿರುವ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಸ್ನಾತಕ (ಯುಜಿ) ಹಾಗೂ ಸ್ನಾತಕೋತ್ತರ (ಪಿಜಿ) ಕಾರ್ಯಕ್ರಮಗಳ ಅಡಿ ವಿದೇಶಿ ವಿದ್ಯಾರ್ಥಿಗಳಿಗಾಗಿ ಶೇ 25ರಷ್ಟು ಹೆಚ್ಚುವರಿ ಸೀಟುಗಳನ್ನು ಹೊಂದಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಅನುಮತಿ ನೀಡಿದೆ' ಎಂದು ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ್ ಭಾನುವಾರ ಹೇಳಿದ್ದಾರೆ.
'ಶಿಕ್ಷಣ ಸಂಸ್ಥೆಗಳು ಪ್ರವೇಶ ಪರೀಕ್ಷೆ ನಡೆಸದೆಯೇ ಈ ಸೀಟುಗಳನ್ನು ಭರ್ತಿ ಮಾಡಿಕೊಳ್ಳಬಹುದು. ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಉದ್ದೇಶದಿಂದ ಹೋದ ವಾರ ನಡೆದ ಯುಜಿಸಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು' ಎಂದು ತಿಳಿಸಿದ್ದಾರೆ.
'ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆ ಹೊಂದಿರುವ ಮೂಲಸೌಕರ್ಯ, ಬೋಧನಾ ಸಿಬ್ಬಂದಿಯ ಲಭ್ಯತೆ ಹಾಗೂ ಇತರ ಮಾನದಂಡಗಳ ಆಧಾರದಲ್ಲಿ ನಿಯಂತ್ರಕ ಸಂಸ್ಥೆಗಳು ಮಾರ್ಗಸೂಚಿ ಸಿದ್ಧಪಡಿಸಲಿವೆ. ಅವುಗಳಿಗೆ ಅನುಗುಣವಾಗಿ ಸಂಬಂಧಪಟ್ಟ ಉನ್ನತ ಶಿಕ್ಷಣ ಸಂಸ್ಥೆಗಳು ನಿಗದಿತ ಸಾಮರ್ಥ್ಯಕ್ಕಿಂತಲೂ ಅಧಿಕ ಸೀಟುಗಳನ್ನು ಹೊಂದುವ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದಾಗಿದೆ' ಎಂದಿದ್ದಾರೆ.
'ಯುಜಿಸಿ ಅಥವಾ ಯುಜಿಸಿ ಮಾನ್ಯತೆ ಹೊಂದಿರುವ ಇತರೆ ಸಂಸ್ಥೆಗಳು ಪ್ರವೇಶಾತಿಗೆ ನಿಗದಿಪಡಿಸಿರುವ ಅರ್ಹತೆಗೆ ಅನುಗುಣವಾಗಿಯೇ ಶಿಕ್ಷಣ ಸಂಸ್ಥೆಗಳು ವಿದೇಶಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಹುದು. ಅಗತ್ಯವಿದ್ದರೆ ಈ ಸಂಸ್ಥೆಗಳು ಪಾರದರ್ಶಕ ಪ್ರವೇಶ ಪ್ರಕ್ರಿಯೆಯನ್ನೂ ಅಳವಡಿಸಿಕೊಳ್ಳಬಹುದು' ಎಂದೂ ತಿಳಿಸಿದ್ದಾರೆ.
'ಈ ಸೀಟುಗಳು ವಿದೇಶಿ ವಿದ್ಯಾರ್ಥಿಗಳಿಗಾಗಿಯೇ ಮೀಸಲಾಗಿರುತ್ತವೆ. ಭರ್ತಿಯಾಗದೆ ಉಳಿದ ಸೀಟುಗಳನ್ನು ವಿದೇಶಿ ವಿದ್ಯಾರ್ಥಿಗಳಲ್ಲದವರಿಗೆ ಹಂಚಿಕೆ ಮಾಡುವಂತಿಲ್ಲ' ಎಂದು ಹೇಳಿದ್ದಾರೆ.