ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ 2,600 ಹಾಸಿಗೆಗಳ ಅಮೃತ ಆಸ್ಪತ್ರೆ ಬುಧವಾರ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಒಂದಕ್ಕೊಂದು ನಿಕಟ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ.
ಕೋವಿಡ್-19 ಲಸಿಕೆ ಅಭಿಯಾನದ ಯಶಸ್ವಿಗೆ ಆಧ್ಯಾತ್ಮಿಕ ಹಾಗೂ ಖಾಸಗಿ ಪಾಲುದಾರಿಕೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ, ಕೇಂದ್ರಿಕೃತ ಸಂಪೂರ್ಣ ಸ್ವಯಂಚಾಲಿತ ಲ್ಯಾಬೋರೇಟರಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ, ಸೌಲಭ್ಯವನ್ನು ಹೊಂದಿರುವ ಅಮೃತ ಆಸ್ಪತ್ರೆಯು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಗೆ ಉತ್ತೇಜನ ನೀಡಲಿದೆ.
ಕೋವಿಡ್ ಲಸಿಕೆ ಅಭಿಯಾನದ ಸಮಯದಲ್ಲಿ ಕೆಲವರು ಕೆಟ್ಟ ಪ್ರಚಾರಕ್ಕೆ ಯತ್ನಿಸಿದರು. ಆದರೆ ಆಧ್ಯಾತ್ಮಿಕ ನಾಯಕರು ಅದನ್ನು ಎದುರಿಸಿದಾಗ ನಮ್ಮ ಜನರು ಮುಂದೆ ಬಂದರು. ಇದು ಲಸಿಕೆ ಅಭಿಯಾನದಲ್ಲೂ ಪ್ರಭಾವ ಬೀರಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ತಂತ್ರಜ್ಞಾನ ಹಾಗೂ ನಾವೀನ್ಯತೆಯ ಸಂಯೋಜನೆಯು ಆರೋಗ್ಯ ಕ್ಷೇತ್ರದಲ್ಲಿ ದೇಶದ ಪ್ರಗತಿಗೆ ಕಾರಣವಾಗುತ್ತದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸಲು ಸರ್ಕಾರ ಹಾಗೂ ಇತರರ ಪಾಲುದಾರಿಕೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಮಾತಾ ಅಮೃತಾನಂದಮಯಿ ಮಠದ ಆಶ್ರಯದಲ್ಲಿ 130 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಕ್ಯಾಂಪಸ್ ಆಸ್ಪತ್ರೆ ಅನ್ನು ಆರು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಏಳು ಅಂತಸ್ತಿನ ರಿಸರ್ಚ್ ಬ್ಲಾಕ್ ಹೊಂದಿದೆ.
ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಉಪಸ್ಥಿತರಿದ್ದರು.
Tweet
Conversation