ನವದೆಹಲಿ: ಸೆ.27 ರಂದು ಟೋಕಿಯೋದಲ್ಲಿ ಅಲ್ಲಿನ ಸರ್ಕಾರ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ಹೊಂದಿದ್ದಾರೆ ಜಪಾನ್ ನ ಮಾಧ್ಯಮವೊಂದು ಸರ್ಕಾರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಜಪಾನ್ ನಲ್ಲಿ ದೀರ್ಘಾವಧಿ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಶಿಂಜೋ ಅಬೆ ಅವರನ್ನು ಜು.08 ರಂದು ಪಶ್ಚಿಮ ಜಪಾನ್ ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಅಬೆ ಅವರೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದ ಪ್ರಧಾನಿ ಮೋದಿ ಅವರು ಶಿಂಜೋ ಅಬೆ ಅವರಿಗೆ ಸರ್ಕಾರಿ ವತಿಯಿಂದ ಸಲ್ಲಿಸಲಾಗುವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಪಾನ್ ನ ಹಾಲಿ ಪ್ರಧಾನಿ ಫುಮಿಯೋ ಕಿಶಿದಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ ಭಾರತ ಸರ್ಕಾರವಾಗಲೀ, ಜಪಾನ್ ಸರ್ಕಾರವಾಗಲೀ ಪ್ರಧಾನಿ ಮೋದಿ ಭಾಗಿಯಾಗುತ್ತಿರುವುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ.
ಶಿಂಜೋ ಅಬೆ ಅವರ ಸಾವಿಗೆ ಸಂತಾಪ ಸಂದೇಶ ಪ್ರಕಟಿಸಿದ್ದ ಮೋದಿ, ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ #ಶಿಂಜೋಅಬೆ ಅವರ ದುರಂತ ನಿಧನದಿಂದ ನಾನು ಪದಗಳಿಗೆ ಮೀರಿ ಆಘಾತ ಮತ್ತು ದುಃಖಿತನಾಗಿದ್ದೇನೆ. "ಭಾರತ-ಜಪಾನ್ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಮಟ್ಟಕ್ಕೆ ಏರಿಸಲು ಅಬೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ್ದರು.
ಗುಂಡೇಟಿಗೆ ತುತ್ತಾಗಿ ಪ್ರಾಣ ತೊರೆದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥ ಭಾರತದಲ್ಲೂ ಒಂದು ದಿನ ಶೋಕಾಚರಣೆ ನಡೆಸಲಾಗಿತ್ತು.