ನವದೆಹಲಿ: ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ ಅಮುಲ್ ಬ್ರಾಂಡ್ ತನ್ನ ಡೈರಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ. ಗೋಲ್ಡ್, ತಾಜಾ ಮತ್ತು ಶಕ್ತಿ ಹಾಲಿನ ಬ್ರಾಂಡ್‌ಗಳ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ 2 ರೂ. ಏರಿಕೆಯಾಗಿದೆ. ನೂತನ ಬೆಲೆಗಳು ಬುಧವಾರದಿಂದ ಜಾರಿಗೆ ಬರಲಿವೆ ಎಂದು ಜಿಸಿಎಂಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಗುಜರಾತ್ ವಲಯದ ಅಹಮದಾಬಾದ್, ಸೌರಾಷ್ಟ್ರ, ದೆಹಲಿಯ ಎನ್ ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಮತ್ತು ಇತರ ಎಲ್ಲಾ ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಅಮೂಲ್ ಹಾಲಿನ ಮಾರಾಟದಲ್ಲಿ 2 ರೂ.ನಷ್ಟು ಏರಿಕ ಮಾಡಲಾಗಿದೆ ಎಂದು ಫೆಡರೇಶನ್ ಹೇಳಿದೆ. ಅಹಮದಾಬಾದ್ , ಸೌರಾಷ್ಟ್ರ ಮಾರುಕಟ್ಟೆಯಲ್ಲಿ ಇದೀಗ 500 ಮಿಲಿ ಅಮುಲ್ ಗೋಲ್ಡ್ ಹಾಲಿನ ಬೆಲೆ ರೂ. 31, ಅಮುಲ್ ತಾಜಾ ಹಾಲಿನ ಬೆಲೆ ರೂ. 25 ಮತ್ತು ಅಮುಲ್ ಶಕ್ತಿ ಬೆಲೆ ರೂ. 28 ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉತ್ಪಾದನೆ ಮತ್ತಿತರ ವೆಚ್ಚದ ಕಾರಣದಿಂದಾಗಿ ಬುಧವಾರದಿಂದ ಜಾರಿಗೆ ಬರುವಂತೆ ದೆಹಲಿ ಎನ್ ಸಿಆರ್ ನಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ರೂ. 2 ಯಷ್ಟು ಹೆಚ್ಚಿಸಲು ಮದರ್ ಡೈರಿ ನಿರ್ಧರಿಸಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಮಾರ್ಚ್ ನಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ರೂ. 2 ನಷ್ಟು ಏರಿಕೆ ಮಾಡಿತ್ತು. ಆಗಸ್ಟ್ 17 ರಿಂದ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ರೂ. 2 ರಷ್ಟು ಹೆಚ್ಚಳ ಮಾಡುವುದಾಗಿ ಕಂಪನಿ ಮಂಗಳವಾರ ಹೇಳಿದೆ. ನೂತನ ದರಗಳು ತನ್ನ ಎಲ್ಲಾ ಹಾಲಿನ ಉತ್ಪನಗಳಿಗೆ ಅನ್ವಯವಾಗಲಿದೆ.