ನವದೆಹಲಿ: ಭಾರತವು ದೇಶೀಯವಾಗಿ ನಿರ್ಮಿಸಿರುವ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಸೆಪ್ಟೆಂಬರ್ 2ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲಿದೆ ಎಂದು ಭಾರತೀಯ ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಎಸ್.ಎನ್ ಘೋರಡೆ ಗುರುವಾರ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕೊಚ್ಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಅಂದು ವಿಕ್ರಾಂತ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ ಎಂದು ಅವರು ಹೇಳಿದರು.
'ವಿಮಾನವಾಹಕ ನೌಕೆ ವಿಕ್ರಾಂತ್‌ನ ಸೇರ್ಪಡೆಯ ದಿನವು ಅವಿಸ್ಮರಣೀಯವಾಗಿರಲಿದೆ. ದೇಶದ ಒಟ್ಟಾರೆ ನೌಕಾಶಕ್ತಿಯನ್ನು ಇದು ಗಮನಾರ್ಹವಾಗಿ ಹೆಚ್ಚಿಸಲಿದೆ' ಎಂದು ಘೋರ್ಮಡೆ ಹೇಳಿದರು. .
ಭಾರತೀಯ ನೌಕಾಪಡೆಯು ಮತ್ತೊಂದು ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ಸಿದ್ಧವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ' ಎಂದು ಹೇಳಿದರು.
ವಿಕ್ರಾಂತ್‌ನ ಕಾರ್ಯಾರಂಭವು ಒಂದು ಐತಿಹಾಸಿಕ ಸನ್ನಿವೇಶವಾಗಿರಲಿದೆ. ಇದು 'ರಾಷ್ಟ್ರೀಯ ಏಕತೆ'ಯ ಸಂಕೇತವಾಗಿದೆ. ವಿಕ್ರಾಂತ್‌ನ ಯಂತ್ರೋಪಕರಣಗಳು, ಬಿಡಿಭಾಗಗಳು ದೇಶದ ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಸಿದ್ಧವಾಗಿ ಬಂದಿವೆ ಎಂದು ಅವರು ಹೇಳಿದರು.
ಸುಮಾರು ₹20,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಕ್ರಾಂತ್, ಕಳೆದ ತಿಂಗಳು ತನ್ನ ನಾಲ್ಕನೇ ಮತ್ತು ಅಂತಿಮ ಹಂತದ ಸಾಗರ ಪ್ರಯೋಗ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ವಿಕ್ರಾಂತ್‌ನ ನಿರ್ಮಾಣದ ಮೂಲಕ ಭಾರತವು, ದೇಶೀಯ ವಿಮಾನವಾಹಕ ನೌಕೆ ನಿರ್ಮಾಣಗೊಳಿಸಿರುವ ಅಮೆರಿಕ, ಬ್ರಿಟನ್, ಚೀನಾ ಹಾಗೂ ಫ್ರಾನ್ಸ್ ಮುಂತಾದ ರಾಷ್ಟ್ರಗಳ ಮಹತ್ತರ ಗುಂಪಿಗೆ ಸೇರ್ಪಡೆಗೊಂಡಿದೆ. ಇಲ್ಲಿಯತನಕ ಭಾರತ ತನಗೆ ಅಗತ್ಯವಿದ್ದ ವಿಮಾನವಾಹಕ ನೌಕೆಯನ್ನು ಆಮದು ಮಾಡಿಕೊಳ್ಳುತ್ತಿತ್ತು.
ನೌಕೆಯು 2,300ಕ್ಕೂ ಹೆಚ್ಚು ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಮಹಿಳಾ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನೂ ಇದು ಒಳಗೊಂಡಿದೆ. ಸುಮಾರು 1700 ಜನರ ಸಿಬ್ಬಂದಿ ಇದರಲ್ಲಿ ಇರಲಿದ್ದಾರೆ.
ವಿಕ್ರಾಂತ್ ಗಂಟೆಗೆ ಗರಿಷ್ಠ 28 ನಾಟ್‌ಗಳ ವೇಗದಲ್ಲಿ ಚಲಿಸಬಲ್ಲದು. 18 ನಾಟ್‌ಗಳ ವೇಗದಲ್ಲಿ 7,500 ನಾಟಿಕಲ್ ಮೈಲುಗಳನ್ನು ಕ್ರಮಿಸುವ ಸಾಮರ್ಥ್ಯವನ್ನು ಅದು ಹೊಂದಿದೆ.
ವಿಮಾನವಾಹಕ ನೌಕೆಯು 262 ಮೀಟರ್ ಉದ್ದ, 62 ಮೀಟರ್ ಅಗಲ ಮತ್ತು 59 ಮೀಟರ್ ಎತ್ತರವನ್ನು ಹೊಂದಿದೆ. ಇದರ ನಿರ್ಮಾಣ ಯೋಜನೆಯು 2007ರಲ್ಲಿ ಜಾರಿಗೆ ಬಂದಿತ್ತು.