ಚೆನ್ನೈ: ಪ್ರತಿಷ್ಠಿತ ಐಐಟಿ-ಮದ್ರಾಸ್‌ನಲ್ಲಿ 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ನಡೆದ ಕ್ಯಾಂಪಸ್ ಸಂದರ್ಶನದ ಮೊದಲ ದಿನವೇ ಇಂಟರ್ನ್‌ಷಿಪ್‌ಗೆ ಆಯ್ಕೆಯಾದವರ ಸಂಖ್ಯೆಯಲ್ಲಿ ಶೇ 32ರಷ್ಟು ಹೆಚ್ಚಳ ಕಂಡುಬಂದಿದೆ.
'ಇಂಟರ್ನ್‌ಷಿಪ್‌ಗಾಗಿ ಇದೇ ಮೊದಲ ಬಾರಿಗೆ ಸಂಸ್ಥೆಯಲ್ಲಿ ಭೌತಿಕ ಹಾಗೂ ಆನ್‌ಲೈನ್ ವಿಧಾನದ ಮೂಲಕ ವಿದ್ಯಾರ್ಥಿಗಳ ಸಂದರ್ಶನ ನಡೆದಿರುವುದು ವಿಶೇಷ' ಎಂದು ಸಂಸ್ಥೆಯ ಇಂಟರ್ನ್‌ಷಿಪ್ ವಿಭಾಘದ ಸಲಹೆಗಾರ ಪ್ರೊ.ಪಿ.ಮುರುಗವೇಲ್ ಹೇಳಿದ್ದಾರೆ.
'ಇಂಟರ್ನ್‌ಷಿಪ್‌ಗಾಗಿ ಆಗಸ್ಟ್ 6 ಮತ್ತು 13ರಂದು ಎರಡು ಹಂತಗಳಲ್ಲಿ ಸಂದರ್ಶನ ನಡೆಯಿತು. ಒಟ್ಟು 37 ಕಂಪನಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ 13 ಕಂಪನಿಗಳು ಭೌತಿಕವಾಗಿ ಹಾಗೂ 24 ಕಂಪನಿಗಳು ಆನ್‌ಲೈನ್ ವಿಧಾನದಲ್ಲಿ ಸಂದರ್ಶನ ನಡೆಸಿದವು' ಎಂದು ಅವರು ಹೇಳಿದ್ದಾರೆ.
ಬ್ರಿಟನ್, ಅಮೆರಿಕ, ಹಾಂಗ್‌ಕಾಂಗ್, ಸಿಂಗಪುರ ಹಾಗೂ ನೆದರ್ಲೆಂಡ್ಸ್‌ನ ಒಟ್ಟು ಏಳು ಕಂಪನಿಗಳಿಂದ 15 ಅಂತರರಾಷ್ಟ್ರೀಯ ಇಂಟರ್ನ್‌ಷಿಪ್‌ಗೆ ಆಯ್ಕೆಯಾಗುವಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
ಟೆಕ್ಸಾಸ್ ಇನ್ಸ್‌ಸ್ಟ್ರುಮೆಂಟ್ಸ್, ಅಮೆರಿಕನ್ ಎಕ್ಸ್‌ಪ್ರೆಸ್, ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಹಾಗೂ ಗೋಲ್ಡ್‌ಮನ್ ಸಾಷ್, ಸಂಸ್ಥೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರುವ ಪ್ರಮುಖ ಕಂಪನಿಗಳಾಗಿವೆ.