ಹಲ್‌ದ್ವಾನಿ : ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಿಮಪಾತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯೋಧರೊಬ್ಬರ ಮೃತದೇಹ 38 ವರ್ಷಗಳ ಬಳಿಕ ಸಿಯಾಚಿನ್‌ನ ಹಳೆಯ ಬಂಕರೊಂದರಲ್ಲಿ ಪತ್ತೆಯಾಗಿದೆ.
ಪತ್ತೆಯಾಗಿರುವ ಮೃತದೇಹವು 19 ಕುಮಾವುಂ ರೆಜಿಮೆಂಟ್‌ನ ಯೋಧ ಚಂದ್ರಶೇಖರ ಹರ್ಬೋಲಾ ಅವರದ್ದು ಎಂದು ರಾಣಿಖೇತ್‌ನಲ್ಲಿರುವ ಸೇನೆಯ ಅಧಿಕಾರಿಗಳು ಗುರುತಿಸಿದ್ದಾರೆ.
ಮತ್ತೊಬ್ಬ ಯೋಧನ ಮೃತದೇಹ ಕೂಡ ಸಿಕ್ಕಿದ್ದು, ಅವರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1984ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು 'ಆಪರೇಷನ್ ಮೇಘದೂತ್'ನ ಭಾಗವಾಗಿ ಚಂದ್ರಶೇಖರ ಸೇರಿದಂತೆ 20 ಮಂದಿಯಿದ್ದ ಯೋಧರ ತಂಡವನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ಗೆ ಕಳುಹಿಸಲಾಗಿತ್ತು. ಈ ತಂಡವು ಗಸ್ತು ತಿರುಗುತ್ತಿದ್ದಾಗ ಹಿಮಪಾತಕ್ಕೆ ಸಿಲುಕಿತ್ತು. ತಂಡದಲ್ಲಿದ್ದ 15 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಚಂದ್ರಶೇಖರ ಸೇರಿದಂತೆ ಐವರ ಮೃತದೇಹಗಳು ಪತ್ತೆಯಾಗಿರಲಿಲ್ಲ.
ಚಂದ್ರಶೇಖರ ಅವರ ಪತ್ನಿ ಶಾಂತಿ ದೇವಿ ಅವರು ಹಲ್‌ದ್ವಾನಿಯ ಸರಸ್ವತಿ ವಿಹಾರ್ ಕಾಲೊನಿಯಲ್ಲಿ ವಾಸವಿದ್ದಾರೆ.
ಹಲ್‌ದ್ವಾನಿಯ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ಚಂದ್ರಶೇಖರ ಅವರ ಮನೆಗೆ ಭೇಟಿ ನೀಡಿದ್ದಾರೆ. ಸಕಲ ಸೇನಾ ಗೌರವಗಳೊಂದಿಗೆ ಚಂದ್ರಶೇಖರ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.
ಚಂದ್ರಶೇಖರ ಅವರು ನಾಪತ್ತೆಗಿದ್ದ ಸಂದರ್ಭದಲ್ಲಿ ಅವರ ದೊಡ್ಡ ಮಗಳಿಗೆ ಐದು ವರ್ಷ ಹಾಗೂ ಸಣ್ಣ ಮಗಳಿಗೆ ಒಂದೂವರೆ ವರ್ಷವಾಗಿತ್ತು ಎಂದು ಶಾಂತಿ ದೇವಿ ತಿಳಿಸಿದ್ದಾರೆ. 1984ರಲ್ಲಿ ಅವರು ಕೊನೆಯ ಬಾರಿಗೆ ಮನೆಗೆ ಬಂದಿದ್ದರು ಎಂದೂ ಅವರು ವಿವರಿಸಿದ್ದಾರೆ.
ಅಲ್ಮೋರಾದ ದ್ವಾರಹತ್ ನಿವಾಸಿ ಚಂದ್ರಶೇಖರ ಅವರು 1975ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.