ನವದಹಲಿ: ಪ್ರತಿಯೊಂದು ರಾಜ್ಯವೂ ಭಾರತದ ಪ್ರತಿ ಯೋಜನೆಗಳ ಮೂಲಕ '3T' (ವ್ಯಾಪಾರ -ಟ್ರೇಡ್, ಪ್ರವಾಸ -ಟೂರಿಸಂ, ತಂತ್ರಜ್ಞಾನ -ಟೂರಿಸಂ) ಅನ್ನು ಪ್ರಪಂಚದಾದ್ಯಂತ ಉತ್ತೇಜಿಸುವುದರತ್ತ ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಭಾನುವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ.
ಆಮದು ಪ್ರಮಾಣವನ್ನು ಕಡಿತಗೊಳಿಸುವುದಕ್ಕೆ, ರಫ್ತು ಹೆಚ್ಚಿಸುವುದಕ್ಕೆ ಮತ್ತು ಅವಕಾಶಗಳನ್ನು ಗುರುತಿಸಿಕೊಳ್ಳುವುದಕ್ಕೆ ರಾಜ್ಯಗಳು ಒತ್ತು ನೀಡಬೇಕು ಎಂದು ಸಲಹೆ ನೀಡಿದ್ದಾರೆ. 'ಸಾಧ್ಯವಿರುವ ಎಲ್ಲ ಕಡೆ ಸ್ಥಳೀಯ ಪದಾರ್ಥಗಳನ್ನು ಬಳಸಲು ಜನರನ್ನು ಪ್ರೋತ್ಸಾಹಿಸಬೇಕು' ಎಂದು ಸೂಚಿಸಿರುವ ಅವರು, 'ವೋಕಲ್ ಫಾರ್ ಲೋಕಲ್' ಎಂಬುದು ರಾಜಕೀಯ ಪಕ್ಷದ ಕಾರ್ಯಸೂಚಿಯಲ್ಲ. ಇದು ಎಲ್ಲರ ಗುರಿ ಎಂದು ಒತ್ತಿ ಹೇಳಿದ್ದಾರೆ.
ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಶ್ರಮಿಸುವ ಅಗತ್ಯವಿದೆ. ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಲು ಮತ್ತು 5 ಲಕ್ಷ ಕೋಟಿ ಡಾಲರ್‌ಗೆ ಕೊಂಡೊಯ್ಯಲು ಇದು ಅತ್ಯಗತ್ಯವೆಂದು ತಿಳಿಸಿದ್ದಾರೆ.
ಗಣನೀಯ ಚರ್ಚೆಗಳ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರೂಪಿಸಲಾಗಿದೆ ಎಂದಿರುವ ಮೋದಿ, ಕಾಲಮಿತಿಯೊಳಗೆ ಎನ್‌ಇಪಿ ಜಾರಿಗೊಳಿಸಲು ಸ್ಪಷ್ಟ ಮಾರ್ಗಸೂಚಿ ರಚಿಸಬೇಕಿದೆ ಎಂದಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಸಭೆಯಲ್ಲಿ ಚರ್ಚಿಸಿದ ವಿಚಾರಗಳು ಮುಂದಿನ 25 ವರ್ಷಗಳವರೆಗೆ ರಾಷ್ಟ್ರೀಯ ಆದ್ಯತೆಗಳೇನು ಎಂಬುದನ್ನು ವ್ಯಾಖ್ಯಾನಿಸಲಿವೆ ಎಂದಿರುವ ಮೋದಿ, 'ಇಂದು ಬಿತ್ತಿರುವ ಬೀಜಗಳು, 2047ಕ್ಕೆ ಫಲ ನೀಡಲಿವೆ' ಎಂದೂ ಉಲ್ಲೇಖಿಸಿದ್ದಾರೆ.