ನವದೆಹಲಿ: ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ 40 ಉಪಗ್ರಹಗಳ ಸಮೂಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸಿದೆ. ಅದು ಭೂ ಕಕ್ಷೆಯಲ್ಲಿ ಮಾಲಿನ್ಯ, ತ್ಯಾಜ್ಯ ಮತ್ತಿತರ ಅವಶೇಷಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ.
ಮುಂದಿನ ವರ್ಷದ ಆರಂಭದಲ್ಲಿ ಉಡಾವಣೆಯಾಗಲಿರುವ ಉಪಗ್ರಹಗಳು, ಭೂ ಕಕ್ಷೆಯಲ್ಲಿ ಲಕ್ಷಾಂತರ ಅವಶೇಷಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತವೆ, ಇದನ್ನು ನಾಸಾ 'ಕಕ್ಷೆಯ ಬಾಹ್ಯಾಕಾಶ ಜಂಕ್ ಯಾರ್ಡ್" ಎಂದು ವಿವರಿಸುತ್ತದೆ. ಮೂವರು ಯುವ ಇಂಜಿನಿಯರ್‌ಗಳು ಪ್ರಾರಂಭಿಸಿದ ಸ್ಟಾರ್ಟ್ ಅಪ್ ದಿಗಂತರಾ ಸ್ವಯಂ ಪ್ರೇರಿತವಾಗಿ ಭೂ ಕಕ್ಷೆಯಲ್ಲಿ ಸ್ವಚ್ಛತೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ನಾಸಾ ಪ್ರಕಾರ, ಈ ಸ್ಪೇಸ್ ಜಂಕ್ ಪ್ರತಿ ಗಂಟೆಗೆ 18,000 ಮೈಲಿ ವೇಗದಲ್ಲಿ ಕ್ರಮಿಸಲಿದೆ. ಅವುಗಳಲ್ಲಿ ಹಲವು 1 ಸೆಂ.ಮೀ ನಿಂದ 10 ಸೆಂ.ಮೀ ವ್ಯಾಸವನ್ನು ಹೊಂದಿರುತ್ತವೆ. ಭೂ ಕಕ್ಷೆಯಲ್ಲಿನ ಬಹುತೇಕ ಅವಶೇಷಗಳು ಮಾನವ-ಉತ್ಪಾದಿತ ವಸ್ತುಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ರಾಕೆಟ್ ಮತ್ತು ಉಪಗ್ರಹ ಘಟಕಗಳು, ಬಾಹ್ಯಾಕಾಶ ನೌಕೆಯ ಬಣ್ಣದ ಸಣ್ಣ ತುಣುಕುಗಳ ಮತ್ತಿತರ ವಸ್ತುಗಳಾಗಿವೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳು ಬಾಹ್ಯಾಕಾಶದಲ್ಲಿರುವ ಶೇಕಡಾ 4 ರಷ್ಟು ವಸ್ತುಗಳ ಬಗ್ಗೆ ಮಾತ್ರ ತಿಳಿದಿರುತ್ತವೆ ಆದರೆ, ಇನ್ನೂ ಶೇ. 96 ರಷ್ಟು ಅಂಕಿಅಂಶಗಳು ಕಾಣೆಯಾಗಿವೆ ಎಂದು ಕೇವಲ 23 ವರ್ಷ ವಯಸ್ಸಿನ ದಿಗಂತರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರಾವತ್ ಹೇಳಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಇ ಕ್ಯೂಬೇಟ್ ಆಗಿರುವ ದಿಗಂತಾರಾ ಸ್ಟಾರ್ಟ್ ಅಪ್, ಬಾಹ್ಯಾಕಾಶದಲ್ಲಿನ ವಾತಾವರಣ ತಿಳಿಯಲು ಇದೇ ವರ್ಷದ ಜೂನ್ 30 ರಂದು ಶೂ ಬಾಕ್ಸ್ ಗಾತ್ರದ ಸಣ್ಣ ಉಪಗ್ರಹವೊಂದನ್ನು ಕಳುಹಿಸಲಾಗಿತ್ತು ಎಂದು ಸ್ಟಾರ್ಟ್ ಅಪ್ ಸಿಇಒ ಅನಿರುದ್ ಶರ್ಮಾ ತಿಳಿಸಿದರು.
ಯುಎಸ್ ಮತ್ತು ಕೆನಡಾದಲ್ಲಿ ಪ್ರತಿಸ್ಪರ್ಧಿಗಳಿದ್ದರೂ ನಾವು ಭಾರತದಲ್ಲಿ ಈ ರೀತಿಯ ಏಕೈಕ ಸ್ಟಾರ್ಟ್-ಅಪ್ ಆಗಿದ್ದೇವೆ. ಸಂಗ್ರಹಿಸಿದ ಡೇಟಾದಿಂದ ತುಂಬಾ ಅನುಕೂಲವಾಗಲಿದೆ ಎಂದು ರಾವತ್ ಹೇಳಿದರು.