ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶದ ರಜೌರಿ ಜಿಲ್ಲೆಯಲ್ಲಿ ಉಗ್ರರು ಸೇನಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ದಾಳಿಕೋರರನ್ನು ಹೊಡೆದುರುಳಿಸಲಾಗಿದೆ. ಇವರಿಬ್ಬರೂ ಪಾಕಿಸ್ತಾನ ಮೂಲದ ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಮಾರಣಾಂತಿಕ 'ಸ್ಟೀಲ್ ಕೋರ್' ಬುಲೆಟ್‌ಗಳೊಂದಿಗೆ ಶಸ್ತ್ರ ಸಜ್ಜಿತರಾಗಿದ್ದ ಇವರನ್ನು ನಾಲ್ಕು ಗಂಟೆಗಳ ನಂತರ ನಡೆದ ಗುಂಡಿನ ಕಾದಾಟದ ನಂತರ ಶೂಟೌಟ್ ಮಾಡಲಾಗಿದೆ. ಗುರುವಾರ ಮುಂಜಾನೆ 2 ಗಂಟೆಗೆ ಆರಂಭವಾದ ಗುಂಡಿನ ಕಾಳಗ ಬೆಳಗ್ಗೆ 6-30ಕ್ಕೆ ಮುಗಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು 75ನೇ ಸ್ವಾತಂತ್ರ್ಯೋತ್ಸವಕ್ಕೆ ನಾಲ್ಕು ದಿನ ಬಾಕಿಯಿರುವಂತೆಯೇ ಉಗ್ರರ ಈ ದಾಳಿ ನಡೆದಿದೆ.
ಸೇನಾಶಿಬಿರದೊಳಗೆ ನುಗ್ಗಲು ಪ್ರಯತ್ನಿಸಿದ ನಿಷೇಧಿತ ಜೈಷ್ ಇ ಮೊಹಮ್ಮದ್ ಸಂಘಟನೆ ಇಬ್ಬರು ಆತ್ಮಾಹತ್ಯಾ ದಾಳಿಕೋರರನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಆರು ಯೋಧರು ಗಾಯಗೊಡಿದ್ದರು. ಅವರಲ್ಲಿ ಮೂವರು ಆತ್ಮಾಹತ್ಯಾ ದಾಳಿಕೋರರನ್ನು ಹಿಮ್ಮೆಟ್ಟಿಸುವಾಗ ಮೃತಪಟ್ಟರೆ, ಓರ್ವ ಯೋಧ ತದನಂತರ ಸಾವನ್ನಪ್ಪಿದರು ಎಂದು ಜಮ್ಮುವಿನ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.