ನವದೆಹಲಿ: 'ನ್ಯಾಯಾಧೀಶರೊಬ್ಬರು 50 ಪ್ರಕರಣ ಇತ್ಯರ್ಥಗೊಳಿಸುವಷ್ಟರಲ್ಲಿ ಹೊಸದಾಗಿ 100 ಮೊಕದ್ದಮೆಗಳು ದಾಖಲಾಗಿರುತ್ತವೆ' ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವಾಲಯ ಹಮ್ಮಿಕೊಂಡಿದ್ದ 'ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಕಾರ್ಯನಿರ್ವಹಣೆ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆ 5 ಕೋಟಿಯ ಗಡಿ ಸಮೀಪಿಸುತ್ತಿರುವ ಬಗ್ಗೆ ಮಾತನಾಡಿದ ಅವರು, 'ನಾಗರಿಕರು ಹಿಂದಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ.
ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕೇಂದ್ರ ಸರ್ಕಾರವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ' ಎಂದಿದ್ದಾರೆ.
ಕೆಳ ನ್ಯಾಯಾಲಯಗಳಲ್ಲಿ 4 ಕೋಟಿಗೂ ಅಧಿಕ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ 72 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದು ರಿಜಿಜು ಅವರು ಸಂಸತ್ತಿನ ಅಧಿವೇಶನದ ವೇಳೆ ಹೇಳಿದ್ದರು.
'ಬಾಕಿ ಪ್ರಕರಣಗಳ ವಿಚಾರವಾಗಿ ಭಾರತವನ್ನು ಇತರ ದೇಶಗಳೊಂದಿಗೆ ಹೋಲಿಸುವುದು ಸರಿಯಲ್ಲ. ಏಕೆಂದರೆ ನಮ್ಮಲ್ಲಿ ವಿಭಿನ್ನ ಸಮಸ್ಯೆಗಳಿವೆ. ಕೆಲವೊಂದು ದೇಶಗಳಲ್ಲಿ 5 ಕೋಟಿಯಷ್ಟು ಜನಸಂಖ್ಯೆಯೇ ಇರುವುದಿಲ್ಲ' ಎಂದು ಹೇಳಿದ್ದಾರೆ.