ಬೆಂಗಳೂರು: ಗ್ರಾಹಕರೊಬ್ಬರು ಕ್ರೆಡಿಟ್ ಕಾರ್ಡ್ ನ ಬಾಕಿ ಮೊತ್ತವನ್ನು ಸೂಕ್ತ ಸಮಯದಲ್ಲಿ ಪಾವತಿ ಮಾಡಿದ್ದರೂ, ಕರೆ/ ಮೆಸೇಜ್ ಮಾಡಿ ಹಣ ಪಾವತಿಸುವಂತೆ ಚಿತ್ರ ಹಿಂಸೆ ನೀಡುತ್ತಿದ್ದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಗ್ರಾಹಕ ಆಯೋಗ ನಿರ್ದೇಶನ ನೀಡಿದೆ.
ಮದ್ರಾಸ್ ನ ಲಾಯರ್ ಲೋಕನಾಥನ್ ಜಯಕುಮಾರ್ ಗೆ ಬ್ಯಾಂಕ್ ಬರೊಬ್ಬರಿ 58 ಬಾರಿ ಕರೆ/ ಮೆಸೇಜ್ ಗಳನ್ನು ಮಾಡಿ ಚಿತ್ರ ಹಿಂಸೆ ನೀಡಿತ್ತು.
ಗ್ರಾಹಕರು ಸೂಕ್ತ ಸಮಯದಲ್ಲಿ ಹಣ ಪಾವತಿಸಿದ್ದರೂ ಬ್ಯಾಂಕ್ ನ ಲೋಪದೋಷಗಳು ಸ್ಪಷ್ಟವಾಗಿದ್ದರಿಂದ ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ರೂಪಾಯಿ ಮೊತ್ತಕ್ಕೆ ಪ್ರತಿ ವರ್ಷಕ್ಕೆ ಶೇ.8 ರಷ್ಟು ಬಡ್ಡಿ ಸೇರಿಸಿ ಪರಿಹಾರವನ್ನು ನೀಡಬೇಕು ಜೊತೆಗೆ ದಾವೆ ವೆಚ್ಚಗಳಿಗಾಗಿ ಹೆಚ್ಚುವರಿ 10,000 ರೂಪಾಯಿ ನೀಡಬೇಕು ಎಂದು ಆಯೋಗ ಸೂಚಿಸಿದೆ.
75 ವರ್ಷದ ವಕೀಲ ಲೋಕನಾಥನ್ ಜಯಕುಮಾರ್, ಕೋರಮಂಗಲ ನಿವಾಸಿಯಾಗಿದ್ದು, 25 ವರ್ಷಗಳಿಂದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಬಾಕಿ ಪಾವತಿಸಬೇಕಿದ್ದ, 31,271 ರೂಪಾಯಿಗಳ ಹಣವನ್ನು ಗಡುವು ಮಿತಿಗೂ ಮುನ್ನವೇ 2022 ರ ಜನವರಿಯಂದು ಚೆಕ್ ಮೂಲಕ ಪಾವತಿಸಿದ್ದರು.
ಕೆಲವು ದಿನಗಳ ನಂತರ ಬ್ಯಾಂಕ್ ಬಾಕಿ ಇರುವ ಹಣ ಪಾವತಿ ಮಾಡುವಂತೆ ನಿರಂತರವಾಗಿ ಕರೆ/ ಮೆಸೇಜ್ ಗಳ ಮೂಲಕ ಚಿತ್ರ ಹಿಂಸೆ ನೀಡಲಾರಂಭಿಸಿತು. ಈ ಹಿನ್ನೆಲೆಯಲ್ಲಿ ವಕೀಲರು ಆಯೋಗಕ್ಕೆ ದೂರು ನೀಡಿದ್ದರು. ಆಯೋಗದಿಂದ ನೊಟೀಸ್ ಜಾರಿಯಾದರೂ ಉತ್ತರಿಸದೇ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಲೋಪದೋಷ ಸಾಬೀತಾಗಿದ್ದು ದಂಡ ವಿಧಿಸಲಾಗಿದೆ.