ವಾರದ ಆರಂಭದಲ್ಲಿ ಕೊನೆಗೊಂಡ ಐದನೆಯ ತಲೆಮಾರಿನ (5ಜಿ) ತರಂಗಾಂತರಗಳ ಹರಾಜು ಪ್ರಕ್ರಿಯೆಯು ದೇಶದ ದೂರಸಂಪರ್ಕ ಹಾಗೂ ಇಂಟರ್ನೆಟ್ ಸೇವೆಗಳನ್ನು ಮೇಲ್ದರ್ಜೆಗೆ ಏರಿಸುವ ದೃಷ್ಟಿಯಿಂದ ಬಹಳ ದೊಡ್ಡ ಹೆಜ್ಜೆ. ಇದು ಭಾರತದಲ್ಲಿನ ದೂರಸಂಪರ್ಕ ಸೇವೆಗಳನ್ನು ಅಮೆರಿಕ, ದಕ್ಷಿಣ ಕೊರಿಯಾ, ಚೀನಾದಂತಹ ದೇಶಗಳಲ್ಲಿನ ದೂರಸಂಪರ್ಕ ಸೇವೆಗಳಿಗೆ ಸರಿಸಾಟಿಯಾಗಿ ನಿಲ್ಲಿಸುವ ಅವಕಾಶವನ್ನು ತೆರೆದಿತ್ತಿದೆ.
ದೇಶದಲ್ಲಿ 5ಜಿ ಸೇವೆಗಳು ಆರಂಭವಾದ ನಂತರದಲ್ಲಿ ಗ್ರಾಹಕರಿಗೆ ಇದುವರೆಗೆ ಸಿಗುತ್ತಿದ್ದ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ ಲಭ್ಯವಾಗುವ ನಿರೀಕ್ಷೆ ಇದೆ. ದೇಶದ ಕೈಗಾರಿಕೆಗಳು 'ನಾಲ್ಕನೆಯ ಕೈಗಾರಿಕಾ ಕ್ರಾಂತಿ'ಯ ಕಡೆಗೆ ದಾಪುಗಾಲು ಇಡಲು ಸಾಧ್ಯವಾಗಬಹುದು ಎಂಬ ಮಾತುಗಳು ಇವೆ. ಇಂಟರ್ನೆಟ್ ಆಫ್ ಥಿಂಗ್ಸ್ ಸಾಕಾರಗೊಳ್ಳುವ ಭರವಸೆ ಇದೆ. ಇವೆಲ್ಲವೂ ನಮ್ಮ ಸಮಾಜಕ್ಕೆ ಹಾಗೂ ಅರ್ಥ ವ್ಯವಸ್ಥೆಗೆ ಹೆಚ್ಚಿನ ಲಾಭ ತಂದುಕೊಡಲಿವೆ ಎಂಬುದರಲ್ಲಿ ಅನುಮಾನ ಇಲ್ಲ. ಈ ಬಾರಿಯ ಹರಾಜಿನಲ್ಲಿ ಪಾಲ್ಗೊಂಡಿದ್ದ ಎಲ್ಲ ಕಂಪನಿಗಳಿಗೂ 5ಜಿ ತರಂಗಾಂತರ ಹಂಚಿಕೆ ಆಗಲಿದೆ.
ಕೇಂದ್ರ ಸರ್ಕಾರಕ್ಕೆ ಹರಾಜು ಪ್ರಕ್ರಿಯೆ ಮೂಲಕ ₹1.5 ಲಕ್ಷ ಕೋಟಿ ವರಮಾನ ದೊರೆತಿದೆ. ಇಷ್ಟು ಮೊತ್ತವು ಕೇಂದ್ರಕ್ಕೆ ತಕ್ಷಣಕ್ಕೆ ಲಭ್ಯವಾಗುವುದಿಲ್ಲ; 20 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಸಿಗಲಿದೆ. ಹರಾಜಿನ ಸಂದರ್ಭದಲ್ಲಿ ನಿಗದಿ ಮಾಡಿದ್ದ ಮೀಸಲು ಬೆಲೆಗೆ ಹೋಲಿಸಿದರೆ ಶೇಕಡ 35ರಷ್ಟು ಮೊತ್ತ ಮಾತ್ರ ಕೇಂದ್ರಕ್ಕೆ ದೊರೆತಿದೆ. ಹೀಗಿದ್ದರೂ, ಇದು ಕೇಂದ್ರ ನಿರೀಕ್ಷೆ ಮಾಡಿದ್ದ ಮೊತ್ತಕ್ಕಿಂತ ಜಾಸ್ತಿ.
ಹರಾಜು ಪ್ರಕ್ರಿಯೆ ಸಾಧ್ಯವಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೊದಲು ತಾಳಿದ್ದ ಕೆಲವು ನಿಲುವುಗಳನ್ನು ಸಡಿಲಗೊಳಿಸಿತು. ತರಂಗಾಂತರ ಸ್ವಾಧೀನ ವೆಚ್ಚವನ್ನು ತಗ್ಗಿಸಿತು, ತರಂಗಾಂತರಗಳಿಗೆ ಕೊಡಬೇಕಿರುವ ಹಣವನ್ನು ಕಂತುಗಳ ರೂಪದಲ್ಲಿ ಪಾವತಿ ಮಾಡಲು ಒಪ್ಪಿಗೆ ನೀಡಿತು, ಬ್ಯಾಂಕ್ ಖಾತರಿಬೇಕು ಎಂಬ ಬೇಡಿಕೆಯನ್ನು ಕೈಬಿಟ್ಟಿತು.
ಅಲ್ಲದೆ, ತರಂಗಾಂತರ ಬಳಕೆ ಶುಲ್ಕವನ್ನು ಮನ್ನಾ ಮಾಡಿತು. ಹರಾಜಿನ ಮೂಲಕ ಕೇಂದ್ರವು ಒಟ್ಟು 51,236 ಮೆಗಾ ಹರ್ಟ್ಸ್ ತರಂಗಾಂತರಗಳನ್ನುಒಟ್ಟು ನಾಲ್ಕು ಕಂಪನಿಗಳಿಗೆ (ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್ಸ್) ಮಾರಾಟ ಮಾಡಿದೆ. ತಮ್ಮ ವಾಣಿಜ್ಯ ವಹಿವಾಟಿಗೆ ಅತಿಹೆಚ್ಚು ಸೂಕ್ತವಾದ ತರಂಗಾಂತರಗಳನ್ನು ಕಂಪನಿಗಳು ಖರೀದಿ ಮಾಡಿವೆ. ಯಾವುದೇ ಕಂಪನಿ ಅತಿಯಾಗಿ ಬಿಡ್ ಮಾಡಿಲ್ಲ ಎಂಬ ವರದಿಗಳಿವೆ. ಮೌಲ್ಯದ ಲೆಕ್ಕದಲ್ಲಿ ಸರಿಸುಮಾರು ಶೇಕಡ 60ರಷ್ಟು ತರಂಗಾಂತರಗಳನ್ನು ರಿಲಯನ್ಸ್ ಜಿಯೊ ತನ್ನದಾಗಿಸಿಕೊಂಡಿದೆ. ಹೆಚ್ಚಿನ ಬೆಲೆಯ 700 ಮೆಗಾ ಹರ್ಟ್ಸ್ ತರಂಗಾಂತರವನ್ನು ಖರೀದಿ ಮಾಡಿರುವುದು ಜಿಯೊ ಮಾತ್ರ. ಜಿಯೊ ಖರೀದಿ ಮಾಡಿರುವ ತರಂಗಾಂತರಗಳ ಪ್ರಮಾಣಕ್ಕೆ ಹೋಲಿಸಿದರೆ ಏರ್‌ಟೆಲ್ ಕಂಪನಿ ಸರಿಸುಮಾರು ಶೇ 80ರಷ್ಟು ತರಂಗಾಂತರ ಖರೀದಿಸಿದೆ.
ಜಿಯೊ ಜೊತೆ ಹೋಲಿಸಿದರೆ ವೊಡಾಫೋನ್ ಐಡಿಯಾ ಖರೀದಿ ಮಾಡಿದ ತರಂಗಾಂತರಗಳ ಸಂಖ್ಯೆಯು ನಾಲ್ಕನೆಯ ಒಂದರಷ್ಟಕ್ಕೆ ಸಮ. ಅದಾನಿ ಸಮೂಹವು ಬಹಳ ಕಡಿಮೆ ಪ್ರಮಾಣದಲ್ಲಿ ತರಂಗಾಂತರ ಖರೀದಿಸಿದೆ. ಅದು ಖಾಸಗಿ ನೆಟ್‌ವರ್ಕ್ ಸ್ಥಾಪಿಸುವ ಇರಾದೆ ಹೊಂದಿರುವುದಾಗಿ ಹೇಳಿದೆ. 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಗೆ ಮಹತ್ವ ಇದೆ.
ಏಕೆಂದರೆ, ಇದು ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಉತ್ತಮಪಡಿಸುತ್ತದೆ. ಶಿಕ್ಷಣ, ಮನರಂಜನೆ, ಟೆಲಿ ಆರೋಗ್ಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 5ಜಿ ಸೇವೆಗಳು ಈಗಾಗಲೇ ಲಭ್ಯವಿರುವ ದೇಶಗಳಲ್ಲಿ ಈ ಸೇವೆಗೆ ಭಾರಿ ಶುಲ್ಕ ನಿಗದಿ ಮಾಡಿಲ್ಲ. ಹೀಗಾಗಿ, ಈ ಸೇವೆಗಳನ್ನು ಆರಂಭಿಸಿದ ನಂತರದಲ್ಲಿ ದೂರಸಂಪರ್ಕ ವಲಯದ ಕಂಪನಿಗಳ ಆದಾಯವು ದೊಡ್ಡ ಪ್ರಮಾಣದಲ್ಲಿ ಜಾಸ್ತಿ ಆಗುವ ಸಾಧ್ಯತೆ ಇಲ್ಲ.
ಕನಿಷ್ಠ ಪಕ್ಷ ಆರಂಭಿಕ ವರ್ಷಗಳಲ್ಲಿಯಂತೂ ದೊಡ್ಡ ಮಟ್ಟದ ಆದಾಯ ಸಿಗಲಿಕ್ಕಿಲ್ಲ. ಆದರೆ, ಕಂಪನಿಗಳು ಸೇವಾ ಶುಲ್ಕ ಹೆಚ್ಚಿಸುವ ಸಾಧ್ಯತೆ ಖಂಡಿತ ಇದೆ. ದೇಶದ ದೂರಸಂಪರ್ಕ ವಲಯದ ಕಂಪನಿಗಳ ಪೈಕಿ ಎಲ್ಲ ಕಂಪನಿಗಳ ಶಕ್ತಿ ಒಂದೇ ಬಗೆಯಲ್ಲಿ ಇಲ್ಲ. ಈ ವಲಯದಲ್ಲಿನ ಸ್ಪರ್ಧೆ ಕೂಡ ಆರೋಗ್ಯಕರವಾಗಿ ಇರಲಿಲ್ಲ. ಆರೋಗ್ಯಕರ ಅಲ್ಲದ ಸ್ಪರ್ಧೆಯು ಗ್ರಾಹಕರಿಗೂ, ಕಂಪನಿಗಳಿಗೂ ಒಳ್ಳೆಯದು ಮಾಡುವುದಿಲ್ಲ. ಗ್ರಾಹಕರ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ರೀತಿಯ ಯಾವುದೇ ಬೆಳವಣಿಗೆ ದೂರಸಂಪರ್ಕ ವಲಯದಲ್ಲಿ ಕಂಡುಬಾರದಂತೆ ಎಚ್ಚರಿಕೆ ವಹಿಸಬೇಕಿದೆ.