ನವದೆಹಲಿ: ದಿನದಿಂದ ದಿನಕ್ಕೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ಬಹುತೇಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಿರುವಾಗ, 1ನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ‘ಸಂಕಷ್ಟ’ದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಪ್ರಧಾನಿಗೆ ಪತ್ರ ಬರೆದಿದ್ದಾಳೆ.
ಹಿಂದಿಯಲ್ಲಿ ಬರೆಯಲಾಗಿರುವ ಈ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ತನ್ನ ಪತ್ರದಲ್ಲಿ, 'ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದಿರಿ. ಇದರಿಂದ ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್) ಸಹ ದುಬಾರಿಯಾಗಿದೆ. ಮತ್ತು ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ. ನನ್ನ ಶಾಲೆಯಲ್ಲಿ ಬೇರೆ ಮಕ್ಕಳು ನನ್ನ ಪೆನ್ಸಿಲ್ ಕದಿಯುತ್ತಾರೆ. ಮನೆಗೆ ಬಂದು ಅಮ್ಮನನ್ನು ಪೆನ್ಸಿಲ್ ಕೊಡಿಸಲು ಕೇಳಿದರೆ, ಅವರು ನನ್ನನ್ನು ಒಡೆಯುತ್ತಾರೆ. ನಾನೇನು ಮಾಡಲಿ?' ಎಂದು ಬಾಲಕಿ ಪ್ರಶ್ನಿಸಿದ್ದಾಳೆ.
ವಕೀಲರಾಗಿರುವ ಆಕೆಯ ತಂದೆ ವಿಶಾಲ್ ದುಬೆ, 'ಇದು ನನ್ನ ಮಗಳ 'ಮನ್ ಕಿ ಬಾತ್', ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡು ಬಂದು ಮನೆಯಲ್ಲಿ ಕೇಳಿದ್ದಾಳೆ. ಆಗ ತಾಯಿ ಆಕೆಯನ್ನು ಗದರಿಸಿದಾಗ ಕೋಪಮಾಡಿಕೊಂಡು ಪತ್ರ ಬರೆದಿದ್ದಾಳೆ' ಎಂದು ತಿಳಿಸಿದ್ದಾರೆ.
ಈ ಪುಟ್ಟ ಹುಡುಗಿಯ ಪತ್ರದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಕೊಂಡಿದ್ದೇನೆ ಎಂದು ಛಿಬ್ರಾಮೌ ಎಸ್ಡಿಎಂ ಅಶೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.