ಛತ್ತೀಸ್ಗಢ: ನಮ್ಮ ಗ್ರಾಮದಲ್ಲಿ ಜನರು ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಇದುವರೆಗೆ 61 ಮಂದಿ ಅದಕ್ಕೆ ಬಲಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಎಂಬುದಾಗಿ ಗ್ರಾಮಸ್ಥರು ಸಂಬಂಧಿತ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಛತ್ತೀಸ್ಗಡದ ಸುಕ್ಮಾ ಜಿಲ್ಲೆಯ ರೆಗಡ್ಗಟ್ಟ ಗ್ರಾಮದಲ್ಲಿನ ಜನರು ಜಿಲ್ಲಾಡಳಿತಕ್ಕೆ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದು, ಗ್ರಾಮಕ್ಕೆ ಕಳೆದ ವಾರ ತೆರಳಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ.
ಅಲ್ಲದೆ ಆ. 8ರಂದು ಗ್ರಾಮಕ್ಕೆ ಪರಿಣತರ ತಂಡವನ್ನು ಕಳಿಸಿಕೊಡಲಾಗುವುದು ಎಂಬ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದಾರೆ.
130 ಕುಟುಂಬಗಳ ಸುಮಾರು 1 ಸಾವಿರ ಮಂದಿ ಈ ಗ್ರಾಮದಲ್ಲಿದ್ದು, ಜು. 27ರಂದು ಜಿಲ್ಲಾಡಳಿತಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದರು. ಕೈ ಹಾಗೂ ಕಾಲುಗಳಲ್ಲಿ ಊತ ಕಾಣಿಸಿಕೊಂಡು ಜನರು ಸಾಯುತ್ತಿದ್ದಾರೆ. 2020ರಿಂದ ಹೀಗಾಗುತ್ತಿದ್ದು, ಇದುವರೆಗೆ ಈ ರೀತಿಯಲ್ಲಿ 61 ಜನರು ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ ಆ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಲ್ಲಿ 47 ಮಂದಿ ಸಾವಿಗೀಡಾಗಿದ್ದು, ಸ್ಥಳೀಯರು ಹೇಳಿರುವಂತೆ ಎಲ್ಲರೂ ಅದೇ ಕಾರಣಕ್ಕೆ ಸತ್ತಿಲ್ಲ. ಕೆಲವರ ದೇಹದಲ್ಲಿ ಊತ ಕಾಣಿಸಿಕೊಂಡಿದ್ದರೂ ಅದು ಬೇರೆ ಬೇರೆ ಕಾರಣಕ್ಕೆ ಇರಬಹುದು. ಇನ್ನು ಅಲ್ಲಿನ ಜಲಮೂಲಗಳಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇರುವುದು, ಇನ್ನೊಂದು ಕಡೆ ಕಬ್ಬಿಣದ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಅದಾಗ್ಯೂ ಜನರು ಯಾಕೆ ಸತ್ತಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ, ಆ. 8ರಂದು ಪರಿಣತರ ತಂಡ ಬಂದು ಪರಿಶೀಲಿಸಿ ವರದಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.