ನವದೆಹಲಿ: ವೈದ್ಯರುಗಳಿಗೆ ಉಚಿತವಾಗಿ ಕೊಡುಗೆಗಳನ್ನು ನೀಡಲು 'ಡೊಲೊ-650' ಮಾತ್ರೆಯ ಉತ್ಪಾದಕ ಸಂಸ್ಥೆಯು ಒಟ್ಟು ₹ 1000 ಕೋಟಿ ವ್ಯಯಿಸಿದೆ ಎಂಬುದು ಗಂಭೀರವಾದ ವಿಷಯ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿತು.
'ಕೋವಿಡ್ ಅವಧಿಯಲ್ಲಿ ಈ ಮಾತ್ರೆಯನ್ನು ತೆಗೆದುಕೊಳ್ಳುವಂತೆ ನನಗೂ ತಿಳಿಸಲಾಗಿತ್ತು. ಆದರೂ, ₹ 1000 ಕೋಟಿ ವೆಚ್ಚ ಮಾಡಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟರು.
ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಆರೋಪ ಮಾಡಿದೆ ಎಂದು ಗುರುವಾರ ಪೀಠದ ಗಮನಕ್ಕೆ ಭಾರತೀಯ ಔಷಧ ಮಾರಾಟಗಾರರು ಮತ್ತು ಪ್ರತಿನಿಧಿಗಳ ಒಕ್ಕೂಟವನ್ನು ಪ್ರತಿನಿಧಿಸಿದ್ದ ವಕೀಲ ಸಂಜಯ್ ಪಾರೀಖ್ ತಂದರು.
ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೂ ಇದ್ದ ಪೀಠವು, ಇದೇ ಸಂದರ್ಭದಲ್ಲಿ ಈ ಕುರಿತು 10 ದಿನದಲ್ಲಿ ಪ್ರತಿಕ್ರಿಯೆ ದಾಖಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ ಸೂಚಿಸಿತು.