ನವದೆಹಲಿ : ಸುಮಾರು ₹6 ಕೋಟಿ ಮೌಲ್ಯದ 2.36 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಸರ್ಕಾರದ ವಿವಿಧ ಇಲಾಖೆಗಳು ಮತ್ತು ರಾಜ್ಯಗಳು ಸಾರ್ವಜನಿಕ ಖರೀದಿ ಪೋರ್ಟಲ್ ಆದ 'ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್'ನಿಂದ (ಜಿಇಎಂ) ಸಂಗ್ರಹಿಸಿವೆ ಎಂಬುದು ಅಧಿಕೃತ ಅಂಕಿಅಂಶವೊಂದರಿಂದ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಹರ್ ಘರ್ ತಿರಂಗ' ಅಭಿಯಾನದ ಕಾರಣ ಇಷ್ಟು ದೊಡ್ಡ ಪ್ರಮಾಣದಲ್ಲಿ ತ್ರಿವರ್ಣ ಧ್ವಜಗಳನ್ನು ಸಂಗ್ರಹಿಸಲಾಗಿತ್ತು. ಅಭಿಯಾನದ ಕಾರಣ ಹಿಂದೆಂದೂ ಕಂಡಿರದಷ್ಟು ದೊಡ್ಡ ಪ್ರಮಾಣದಲ್ಲಿ ಧ್ವಜಗಳಿಗಾಗಿ ಬೇಡಿಕೆ ಉಂಟಾಗಿತ್ತು. ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಧ್ಜಜ ಮಾರಾಟಗಾರರನ್ನು ತ್ವರಿತಗತಿಯಲ್ಲಿ ಜಿಇಎಂ ವೇದಿಕೆಗೆ ಕೊರೆದುಕೊಂಡು ಬೇಡಿಕೆಯನ್ನು ಪೂರೈಸಲಾಯಿತು. ಜಿಇಎಂನ ತಂಡವು ಧ್ವಜ ಕೊಳ್ಳುವ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳ ಜೊತೆ ಸಂವಹನ ನಡೆಸುತ್ತ ಧ್ವಜ ಸಂಗ್ರಹ ಕೆಲಸವು ಯಾವುದೇ ಅಡ್ಡಿ ಇಲ್ಲದೆ ನಡೆಯುವಂತೆ ಮಾಡಿತು' ಎಂದು ಜಿಇಎಂ ಸಿಇಒ ಪಿ.ಕೆ. ಸಿಂಗ್ ಹೇಳಿದ್ದಾರೆ.
ಸುಮಾರು 4,149 ಮಾರಾಟಗಾರರು ಜಿಇಎಂ ವೇದಿಕೆಯಲ್ಲಿ ಧ್ವಜಗಳನ್ನು ಪೂರೈಸುವ ಸಲುವಾಗಿ ನೋಂದಣಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸರ್ಕಾರಿ ಖರೀದಿದಾರರಿಗೆ ಪಾರದರ್ಶಕ ಮತ್ತು ಮುಕ್ತ ವೇದಿಕೆಯನ್ನು ನಿರ್ಮಿಸುವ ಸಲುವಾಗಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು 2016ರ ಆಗಸ್ಟ್ 9ರಂದು ಜಿಇಎಂಗೆ ಚಾಲನೆ ನೀಡಿತ್ತು.