ಗಾಂಧಿನಗರ: ಆರು ವರ್ಷಗಳಿಗೂ ಹೆಚ್ಚು ಶಿಕ್ಷೆ ವಿಧಿಸುವ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು 'ಕಡ್ಡಾಯ ಮತ್ತು ಕಾನೂನುಬದ್ಧ' ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಭಾನುವಾರ ನಡೆದ ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ಯುನಿವರ್ಸಿಟಿಯ (ಎನ್‌ಎಫ್‌ಎಸ್‌ಯು) ಮೊದಲ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಸ್ವತಂತ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ದೇಶದ ಪ್ರತಿಯೊಂದು ಜಿಲ್ಲೆಗೂ ಸರ್ಕಾರವು ಸಂಚಾರಿ ವಿಧಿವಿಜ್ಞಾನ ತನಿಖಾ ಸೌಲಭ್ಯ ಒದಗಿಸಲಿದೆ ಎಂದು ಶಾ ತಿಳಿಸಿದರು.
ವಿಧಿವಿಜ್ಞಾನ ಪುರಾವೆಯನ್ನು ಸರ್ಕಾರ ಕಡ್ಡಾಯ ಮತ್ತು ಕಾನೂನುಬದ್ಧಗೊಳಿಸಿದಾಗ, ಎಷ್ಟು ವಿಧಿ ವಿಜ್ಞಾನ ಪರಿಣತ ಪದವೀಧರರು ಮತ್ತು ಎರಡು ಪದವಿ ಪಡೆದವರು ಬೇಕಾಗುತ್ತಾರೆ ಎಂಬುದನ್ನು ಊಹಿಸಬಹುದು. ಆಗ ಯಾವುದೇ ಪದವೀಧರ ಎನ್‌ಎಫ್‌ಎಸ್‌ಯು ವಿದ್ಯಾರ್ಥಿಯೂ ಉದ್ಯೋಗವಿಲ್ಲದೆ ಇರುವುದಿಲ್ಲ ಎಂದರು.
ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಎವಿಡೆನ್ಸ್ ಕಾಯ್ದೆಯಲ್ಲಿ ಬದಲಾವಣೆ ಮಾಡಲಿದೆ. ಏಕೆಂದರೆ ಸ್ವಾತಂತ್ರ್ಯದ ನಂತರ ಯಾರೂ ಈ ಕಾನೂನುಗಳನ್ನು ಭಾರತೀಯ ದೃಷ್ಟಿಕೋನದಿಂದ ನೋಡಿರಲಿಲ್ಲ ಎಂದರು.