ಜೈಪುರ: 60 ವಯಸ್ಸಿನ ನಂತರವೂ ದಂಪತಿ ಮಗು ಪಡೆಯುವುದು ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಸುದ್ದಿಯಾಗುತ್ತಿರುವ ಸಂಗತಿ. ಈಗ ರಾಜಸ್ಥಾನದ ಆಲ್ವಾರ್ ನಲ್ಲಿ ದಂಪತಿ ತಮ್ಮ ವಿವಾಹವಾದ 54 ವರ್ಷಗಳ ನಂತರ ಮಗುವನ್ನು ಸ್ವಾಗತಿಸಿದ್ದಾರೆ.
75 ವರ್ಷದ ಪುರುಷ ಹಾಗೂ 70 ವರ್ಷದ ಮಹಿಳೆ ತಮ್ಮ ಮೊದಲ ಮಗುವನ್ನು ಪಡೆದಿದ್ದು, ಇದು
ರಾಜ್ಯದ ಮೊದಲ ಪ್ರಕರಣವಾಗಿದೆ. ಐವಿಎಫ್ ಟೆಕ್ನಾಲಜಿ ಮೂಲಕ 70-80 ವಯಸ್ಸಿನ ಹಲವು ದಂಪತಿ
ದೇಶ, ಜಗತ್ತಿನಾದ್ಯಂತ ಮಗು ಪಡೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
75 ನೇ ವಯಸ್ಸಿನಲ್ಲಿ ಮಗು ಪಡೆದ ಗೋಪಿಚಂದ್ ನಿವೃತ್ತ ಯೋಧರಾಗಿದ್ದು, ಜುಂಜುನು ಪ್ರದೇಶದ
ನುಹನಿಯಾ ಗ್ರಾಮಸ್ಥನಾಗಿದ್ದು ಬಾಂಗ್ಲಾ ಯುದ್ಧದಲ್ಲಿ ಭಾಗವಹಿಸಿದ್ದರು. ಈ ಯುದ್ಧದಲ್ಲಿ
ಅವರ ಕಾಲಿಗೆ ಗುಂಡೇಟು ತಗುಲಿತ್ತು.
ವೈದ್ಯ ಪಂಕಜ್ ಗುಪ್ತ ತಾಯಿ-ಮಗು ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು 3.5 ಕೆ.ಜಿ ತೂಕವಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಈ ವಯಸ್ಸಿನಲ್ಲಿ ಮಗು ಪಡೆಯುವ ಕೆಲವೇ ಪ್ರಕರಣಗಳ ಪೈಕಿ ಇದು ಒಂದಾಗಿದ್ದು, ರಾಜಸ್ಥಾನದಲ್ಲಿ 75 ವಯಸ್ಸಿನ ಪುರುಷ ಹಾಗೂ 70 ವರ್ಷದ ಮಹಿಳೆ ಮಗು ಪಡೆದ ಪ್ರಕರಣ ಬಹುಶಃ ಇದು ಮೊದಲಿರಬೇಕು ಎನ್ನುತ್ತಾರೆ ವೈದ್ಯರು.
ಮಗುವನ್ನು ಪಡೆದ ಸಂತಸದಲ್ಲಿರುವ ಗೋಪಿಚಂದ್, ನಮ್ಮ ಕುಟುಂಬ ಮುಂದುವರೆಸುವುದಕ್ಕೆ ಮಗ ಇದ್ದಾನೆ, ನಾನು ನಮ್ಮ ತಂದೆಗೆ ಒಬ್ಬನೇ ಮಗ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ 1 ವರೆ ವರ್ಷದ ಹಿಂದೆ ಗೋಪಿಚಂದ್ ಫರ್ಟಿಲಿಟಿ ಕೇಂದ್ರವನ್ನು ಸಂಪರ್ಕಿಸಿದ್ದರು, ಅವರ ಪತ್ನಿ ಚಂದ್ರವತಿ ದೇವಿಗೆ ಮೂರನೇ ಪ್ರಯತ್ನದಲ್ಲಿ ಐವಿಎಫ್ ಮೂಲಕ ಗರ್ಭಧಾರಣೆ ಯಶಸ್ವಿಯಾಗಿತ್ತು. ಸಂತಸದ ಜೊತೆಗೆ ತಾಯಿಗೆ ಈ ವಯಸ್ಸಿನಲ್ಲಿ ಮಗು ಪಡೆಯುತ್ತಿರುವುದಕ್ಕೆ ಆತಂಕವೂ ಇತ್ತು.
ಕೇಂದ್ರ ಸರ್ಕಾರ ಇತ್ತೀಚೆಗೆ ಕಾನೂನು ಮಾಡಿದ್ದರ ಪರಿಣಾಮ, ಜೂನ್ 2022 ರಿಂದ ಜಾರಿಗೆ ಬಂದಿರುವ ಕಾನೂನಿನ ಪ್ರಕಾರ 50 ವರ್ಷದ ಮೇಲ್ಪಟ್ಟ ಪುರುಷ-ಮಹಿಳೆಯರಿಗೆ ಐವಿಎಫ್ ಫರ್ಟಿಲಿಟಿ ಕೇಂದ್ರಗಳ ಮೂಲಕ ಚಿಕಿತ್ಸೆ ನೀಡುವಂತಿಲ್ಲ. ಆದರೆ ಈ ಮಹಿಳೆಗೆ ಕಾನೂನು ಜಾರಿಗೂ ಮುನ್ನವೇ ಗರ್ಭಧಾರಣೆ ಯಶಸ್ವಿಯಾಗಿತ್ತು.
ಗೋಪಿ ಚಂದ್ ಸೇನೆಯಿಂದ ನಿವೃತ್ತರಾಗಿ 40 ವರ್ಷಗಳು ಕಳೆದಿವೆ. ಗೋಪಿಚಂದ್ ಅವರು ಬಾಂಗ್ಲಾ ಯುದ್ಧದಲ್ಲಿ ಭಾಗಿಯಾಗಿದ್ದರು, ಅವರ ಪತ್ನಿ ಚಂದ್ರವತಿ ಅವರ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೂ ಸಹ ಓರ್ವ ಯೋಧರೇ ಆಗಿದ್ದಾರೆ.