ಉತ್ತರಕಾಶಿ : ಸೈನಿಕರು ತಿರಂಗಾವನ್ನು ಹಿಡಿದು, 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುತ್ತ, ಭೋರ್ಗರೆವ ನದಿಯನ್ನು ದಾಟುತ್ತಿರುವ ವಿಡಿಯೋವನ್ನು 'ಇಂಡೋ ಟಿಬೆಟ್ ಗಡಿ ಭದ್ರತಾ ಪಡೆ (ಐಟಿಬಿಪಿ)'ಯು ತನ್ನ ಟ್ವಿಟರ್ ಖಾತೆಯಲ್ಲಿ ಭಾನುವಾರ ಹಂಚಿಕೊಂಡಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಐಟಿಬಿಪಿ ಆಗಸ್ಟ್ 1ರಂದು ದೂರಗಾಮಿ ಗಸ್ತು ಕೈಗೊಂಡಿದೆ. ಅಕ್ಟೋಬರ್ 15ರಂದು ಕೊನೆಯಾಗಲಿರುವ ಈ ಗಸ್ತಿನಲ್ಲಿ ಐಟಿಬಿಪಿ ಸೈನಿಕರು ಸುಮಾರು 7,575 ಕಿ. ಮೀ ಕ್ರಮಿಸಲಿದ್ದಾರೆ.
ಬೆಟ್ಟ, ಗುಡ್ಡಗಳನ್ನು ಹಾದು ಹೋಗುವ ಯಾನ ಈಗ ಉತ್ತರಾಖಂಡದ ಉತ್ತಕಾಶಿಯಲ್ಲಿದೆ. ಅಲ್ಲಿ ಎದುರಾದ ಭೋರ್ಗರೆವ ನದಿಯನ್ನು ಐಟಿಬಿಪಿ ಸೈನಿಕರು ಭಾನುವಾರ ದಾಟಿದರು. ಈ ಅಪರೂಪದ ಕ್ಷಣವನ್ನು ಐಟಿಬಿಪಿ ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದೆ.
ಉತ್ತರಕಾಶಿಯಲ್ಲಿರುವ ಐಟಿಬಿಪಿ ಸೈನಿಕರು, ಸ್ಥಳೀಯವಾಗಿ ಗಿಡ ನೆಡುವ ಕಾರ್ಯಕ್ರಮ, ವೈದ್ಯಕೀಯ ಮತ್ತು ಪಶುವೈದ್ಯಕೀಯ ಶಿಬಿರಗಳನ್ನು ನಡೆಸಿದ್ದಾರೆ. ದೂರದ ಗಡಿ ಗ್ರಾಮಗಳಲ್ಲಿ ಅನೇಕ ನಾಗರಿಕ ಸ್ನೇಹಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ ಎಂದು ಐಟಿಬಿಪಿ ಮಾಹಿತಿ ನೀಡಿದೆ.