ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇಂಡೊ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆ ಯೋಧರು 75 ಶಿಖರಗಳನ್ನು ಏರಲಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಲ್ಲದೆ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) 75 ದಿನಗಳ ದೀರ್ಘ ವ್ಯಾಪ್ತಿಯ ರಿಲೇ ಗಸ್ತನ್ನು ಹಮ್ಮಿಕೊಳ್ಳಲಿದ್ದಾರೆ ಎಂದೂ ಹೇಳಿದ್ದಾರೆ.
'ಅಮೃತಾರೋಹಣ್' ಎಂಬ ಹೆಸರಿನಲ್ಲಿ ಪರ್ವತಾರೋಹಣ ನಡೆಯಲಿದ್ದು, ಆಗಸ್ಟ್ 15ರಂದು ಆರಂಭವಾಗಲಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಭಾರತ-ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆಯ ಬಳಿಯಿರುವ ಐಟಿಬಿಪಿ ಗಡಿ ಠಾಣೆಗಳಿಗೆ ಸಮೀಪದ ಶಿಖರಗಳನ್ನು ಯೋಧರು ಏರಲಿದ್ದಾರೆ ಎಂದೂ ವಿವರಿಸಿದ್ದಾರೆ.
ಲಡಾಖ್‌ನ 33, ಉತ್ತರಾಖಂಡದ 16, ಸಿಕ್ಕಿಂನ 11, ಹಿಮಾಚಲ ಪ್ರದೇಶದ 10 ಮತ್ತು ಅರುಣಾಚಲ ಪ್ರದೇಶ 5 ಶಿಖರಗಳನ್ನು ಯೋಧರು ಏರಲಿದ್ದಾರೆ ಎಂದೂ ತಿಳಿಸಿದ್ದಾರೆ.