ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದವಿದ್ಯಾಪೀಠದಲ್ಲಿ ದೇಶದ 76ನೇ ಸ್ವಾತಂತ್ರ್ಯದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಧ್ವಜಾರೋಹಣಗೈದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಪೂಜ್ಯಶ್ರೀಗಳು ದೀಪಪ್ರಜ್ವಾಲನೆಗೈದು ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿ, ವಿವಿಧ ಜಾತಿ, ಮತ, ಪಂಗಡಗಳಿಂದೊಡಗೂಡಿದ ಭಾರತವು ಸಂಸ್ಕೃತಿಪ್ರಧಾನವಾದ ದೇಶವಾಗಿದ್ದು ಎಲ್ಲರೂ ಸಮಾನತೆಯ ಭಾವನೆಯಿಂದ ಭಾರತೀಯಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸ್ವಾತಂತ್ರ್ಯದಿನದ ಸಂದೇಶವನ್ನಿತ್ತರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದಿನದ ಅಂಗವಾಗಿ ಶಾಲಾಮಕ್ಕಳಿಗೆ ನಡೆಸಲಾದ ವಿವಿಧಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದರೊಂದಿಗೆ 2021-22ನೇ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಂಸ್ಥೆಗೆ ಸತತ 9ನೇ ವರ್ಷವೂ 100 ಪ್ರತಿಶತ ್ಠಫಲಿತಾಂಶ ಲಭಿಸಲು ಕಾರಣೀಭೂತವಾದ ಅಧ್ಯಾಪಕವೃಂದವನ್ನು ಶ್ರೀಗಳವರು ಸಂಮಾನಿಸಿ ಹರಸಿದರು.
ಶಾಲಾ ಆಡಳಿತಸಮಿತಿಯ ಅಧ್ಯಕ್ಷರಾ ರಾಮಚಂದ್ರ ಚೆರುಗೋಳಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಸಮಿತಿ ಸದಸ್ಯ ಅಶೋಕ್ ಬಾಡೂರು, ಶಾಲಾ ಸಮಿತಿ ಅಧ್ಯಕ್ಷ ತಾರಾನಾಥ್, ಮಾತೃಸಮಿತಿಯ ಅಧ್ಯಕ್ಷೆ ಆಶಾ ರೈ ಮತ್ತು ಶಿಶುವಾಟಿಕಾಸಮಿತಿ ಅಧ್ಯಕ್ಷ ಅರವಿಂದಾಕ್ಷ ರವರುಗಳು ಶುಭಾಶಂಸನೆಯಿತ್ತರು. ಶಾಲಾ ಪ್ರಾಂಶುಪಾಲ ಪ್ರವಿಧ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಶಿಕ್ಷಕಿಯರಾದ ಕುಮಾರಿ ಅರ್ಪಿತಾ ಸ್ವಾಗತಿಸಿ, ರಮ್ಯಶ್ರೀ ವಂದಿಸಿದರು. ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.